ಬೆಂಗಳೂರು : ರಾಜ್ಯದಲ್ಲಿ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಸದ್ಯದ ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ. ಆದರೆ ಗ್ಯಾರಂಟಿಗಳಿಗೆ ನಾವು ಕೊಡುತ್ತಿರುವುದು 60 ಸಾವಿರ ಕೋಟಿ ರೂಪಾಯಿ. ಹೀಗಾಗಿ ವಿಪಕ್ಷ ನಾಯಕ ಆರ್. ಅಶೋಕ್ ಅವರ ಮಾತುಗಳಿಗೆ ಅರ್ಥವಿಲ್ಲ. ಆರ್.ಅಶೋಕ್ ಗೆ ಇದೆಲ್ಲಾ ಅರ್ಥ ಆಗುವುದೂ ಇಲ್ಲ , ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಅವರಲ್ಲಿ ಇಲ್ಲ ಎಂದರು.
ಜನರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದೊಂದಿಗೆ ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆಯಲ್ಲಿ 3 ರೂ. ಗಳಷ್ಟು ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. ವ್ಯವಸ್ಥೆ ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಇರುವ ಅವಕಾಶ ಸೀಮಿತಗೊಂಡಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. ಆದಾಯ ತೆರಿಗೆ, ಕೇಂದ್ರ ಅಬಕಾರಿ ಸುಂಕ ಮೊದಲಾದ ಮೂಲಗಳಿಂದ ತೆರಿಗೆ ಸಂಗ್ರಹಿಸುತ್ತದೆ. ರಾಜ್ಯ ಸರ್ಕಾರಕ್ಕೆ ಕೇವಲ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತು ಪಡಿಸಿ ಯಾವುದೇ ಆದಾಯ ಮೂಲಗಳು ಉಳಿದಿಲ್ಲ ಎಂದು ಹೇಳಿದ್ದಾರೆ.