ರಾಮನಗರ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಅತ್ಯಂತ ಪ್ರಮುಖ ಕ್ಷೇತ್ರವಾಗಿತ್ತು. ಏಕೆಂದರೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಡಿಕೆ ಸುರೇಶ್ ಅವರ ವಿರುದ್ಧ ಬಿಜೆಪಿಯ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಬೆಂಬಲಿಸದಿದ್ದರೆ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಲಾಗುತ್ತದೆ ಎಂದು ಶಾಸಕ HCಬಾಲಕೃಷ್ಣ ಹೇಳಿಕೆ ನೀಡಿದ್ದರು.
ಇದೀಗ ಅಂತಹದ್ದೇ ಶಾಕಿಂಗ್ ಹೇಳಿಕೆಯನ್ನು ಮತ್ತೆ ಪುನರುಚ್ಚಿಸಿದ್ದು, ನಿಮ್ಮ ಗ್ಯಾರಂಟಿಗಳ ಅಗತ್ಯವಿಲ್ಲ ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದು ಅವರು ಹೇಳಿರುವುದು ಅನುಮಾನ ಸೃಷ್ಟಿಸಿದೆ.ಹೌದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸದಿದ್ದರೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಈ ಹಿಂದೆ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ ಹೇಳಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಬಾಲಕೃಷ್ಣ ಮತ್ತೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಿಮ್ಮ ಗ್ಯಾರಂಟಿಗಳ ಅಗತ್ಯವಿಲ್ಲ ಎಂದು ಜನ ತೀರ್ಮಾನ ಮಾಡಿದ್ದಾರೆ.ಹೃದಯವಂತ, ಹೊಸ ಮುಖ ಅಂತ ಜನ ಬಿಜೆಪಿಗೆ ಓಟ್ ನೀಡಿದ್ದಾರೆ. ರಾಜಕೀಯದಲ್ಲಿ ಇಂಥ ಸೋಲಿನ ಸಾಕಷ್ಟು ಉದಾಹರಣೆಗಳು ಇವೆ. ಇಂದಿರಾಗಾಂಧಿ, ವಾಜಪೇಯಿಯಂಥವರೇ ಸೋತಿದ್ದಾರೆ ಎಂದು ಅವರು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಕೈ ಹಿಡಿದಿಲ್ಲ ಎಂಬ ಮನವರಿಕೆ ಆಗಿದೆ. ಬೇರೆ ಯಾವಪಟ್ಟು ಹಾಕಬೇಕಿತ್ತು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡ್ತೇವೆ. ನಿಮ್ಮ ಗ್ಯಾರಂಟಿ ಅವಶ್ಯಕತೆ ಇಲ್ಲ ಅಂತ ಜನ ತೀರ್ಮಾನ ಮಾಡಿದ್ದಾರೆ. ಇದನ್ನ ಮುಂದುವರೆಸಬೇಕೇ ಬೇಡವೇ ಎಂಬುದನ್ನು ತೀರ್ಮಾನ ಮಾಡುವಷ್ಟು ದೊಡ್ಡವ ನಾನಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಂತ್ರಿಮಂಡಲ ಎಲ್ಲಾ ಇದೆ. ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬಾಲಕೃಷ್ಣ ಹೇಳಿದರು.