ಮೈಸೂರು : ಇತ್ತೀಚೆಗೆ ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದ ತನಿಖೆ ಇನ್ನು ನಡೆಯುತ್ತಿರುವಾಗಲೇ ಮೈಸೂರಿನಲ್ಲಿ ಮತ್ತೊಂದು ಅಕ್ರಮ ಹಣ ವರ್ಗಾವಣೆ ಆಗಿರುವಂತಹ ಹಗರಣ ಬೆಳಕಿಗೆ ಬಂದಿದೆ.ಜನರ ಕಂದಾಯ ಹಣವನ್ನ ಸರ್ಕಾರಕ್ಕೆ ಕಟ್ಟದೇ ಸಿಬ್ಬಂದಿ ತಮ್ಮ ಖಾತೆಗೆ ಜಮೆ ಮಾಡಿಕೊಂಡ ಘಟನೆ ಮೈಸೂರು ತಾಲೂಕಿನ ಶ್ರೀರಾಂಪುರ ಪಟ್ಟಣ ಪಂಚಾಯ್ತಿಯಲ್ಲಿ ನಡೆದಿದೆ.
ಹೌದು ಮೈಸೂರು ತಾಲೂಕಿನ ಶ್ರೀರಾಂಪುರ ಪಟ್ಟಣ ಪಂಚಾಯ್ತಿಯಲ್ಲಿ ಜನರು ಸರ್ಕಾರಕ್ಕೆ ಕಟ್ಟಿರುವಂತಹ ತೆರಿಗೆ ರೂಪದ ಕಂದಾಯದ ಹಣವನ್ನು ನೌಕರರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಆಗಿದೆ.ತೆರಿಗೆದಾರರು ಪಾವತಿಸಿರುವ ಹಣಕ್ಕೆ ನಕಲಿ ರಸೀದಿ ನೀಡಿ, ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡಿರುವ ಸಿಬ್ಬಂದಿ. ಪಟ್ಟಣ ಪಂಚಾಯಿತಿ ಡೇಟಾ ಆಪರೇಟರ್ ನಮ್ರತಾ ಸೇರಿ ಮೂವರು ಸಿಬ್ಬಂದಿ ಕೃತ್ಯ ಆರೋಪ ಕೇಳಿಬಂದಿದೆ.
ಕಳೆದ 15 ದಿನಗಳ ಹಿಂದೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಬಿ.ಶುಭಾ ತಪಾಸಣೆ ನಡೆಸಿದ್ದರು. ಮೂವರು ಸಿಬ್ಬಂದಿಗಳು ಸುಮಾರು ಒಂದೂವರೆ ಲಕ್ಷ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವರ್ಗಾವಣೆ ಹಾಗೂ ಇನ್ನಿತರ ಮೂಲಕಗಳಿಂದ ಹಣದ ದುರುಪಯೋಗವಾಗಿದೆ. ಹಗರಣ ಕುರಿತು ಸ್ಥಳದಲ್ಲೇ ತಂಡ ರಚಿಸಿ ತನಿಖೆಗೆ ಆದೇಶಿಸಿರುವ ಅಧಿಕಾರಿ, ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.