ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದು ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿತ್ತು. ಈ ಒಂದು ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಪ್ರಜ್ವಲ್ ಪಾಸ್ ಪೋರ್ಟ್ ರದ್ದಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.
ಬೆಂಗಳೂರಲ್ಲಿ ಸದಾಶಿವನಗರದ ತಮ್ಮ ನಿವಾಸದ ಬಳಿ, ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಕೇಂದ್ರ ಸರ್ಕಾರವು ಕಾನೂನಿನ ಚೌಕಟ್ಟಿನಲ್ಲಿ ಸಹಾಯ ಮಾಡಬೇಕು. ಬರೀ ಟೀಕೆ ಮಾಡಿದರೆ ಅರ್ಥವಿಲ್ಲ. ಪ್ರಜ್ವಲ್ ರೇವಣ್ಣ ಅವರ ಮೇಲೆ ವಾರಂಟ್ ಜಾರಿ ಮಾಡಿರುವುದನ್ನು ತಿಳಿಸಲಾಗಿದೆ. ವಾರಂಟ್ ಜಾರಿಯಾದ ನಂತರ ಪಾಸ್‌ಪೋರ್ಟ್ ರದ್ದುಗೊಳಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಈವರೆಗೂ ಸ್ಪಂದಿಸಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಎಸ್‌ಐಟಿ ಪತ್ರ ಬರೆದಿದ್ದಾರೆ. ಈವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರುವ ಕುರಿತು ನಾನು ಮತ್ತು ಮುಖ್ಯಮಂತ್ರಿ ಅಂಕಿ-ಅಂಶವನ್ನು ಪ್ರಕಟಿಸಿದ್ದೇವೆ. ಯಾರ ಕಾಲದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿದ್ದವು ಎಂಬುದಕ್ಕೆ ಅಂಕಿ-ಅಂಶಗಳಿವೆ. ಅದಕ್ಕೆ ಬಿಜೆಪಿಯವರು ಮೊದಲು ಉತ್ತರ ನೀಡಲಿ. ಬಿಜೆಪಿ ಅವಧಿಯಲ್ಲಿ ಎಷ್ಟು ಕೊಲೆ ನಡೆದಿದ್ದವು. ನಮ್ಮ ಅವಧಿಯಲ್ಲಿ ಎಷ್ಟು ನಡೆದಿವೆ ನೊಡಲಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಸವಾಲು ಹಾಕಿದರು.