ಬೆಂಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರು ಬಿಡುಗಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಂಕಷ್ಟದಲ್ಲಿದ್ದಾಗ ಯಾವುದೇ ರೀತಿಯಾದ ಸಂಭ್ರಮಾಚರಣೆ ಹಾಗೂ ಪಟಾಕಿ ಸಿಡಿಸುವುದು ಬೇಡ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ನಾನು ನ್ಯಾಯಾಲಯಕ್ಕೆ ತಲೆಬಾಗಿದ್ದೇನೆ. ಯಾರು ಕೂಡ ಸಂಭ್ರಮಾಚರಣೆ ಮಾಡಬೇಡಿ. ರಾಜ್ಯದ ಜನತೆಗೆ ನಾನು ಹೇಳುವುದಿಷ್ಟೇ ಯಾವುದೇ ತರಹ ಸಂಭ್ರಮಾಚರಣೆ ಮಾಡುವುದಕ್ಕೆ ಹೋಗಬೇಡಿ. ಇವತ್ತು ನಾನು ನ್ಯಾಯಾಲಯಕ್ಕೆ ತಲೆಬಾಗಿದ್ದೇನೆ ನಾನು ಏನೇ ತಪ್ಪು ಮಾಡಿಲ್ಲ ಎಲ್ಲವನ್ನು ದೇವರಿಗೆ ಬಿಟ್ಟಿದ್ದೇನೆ ಎಂದು ತಿಳಿಸಿದರು.
ನ್ಯಾಯಾಲಯ ಏನು ಆದೇಶ ಕೊಟ್ಟಿದೆಯೋ ಅದಕ್ಕೆ ತಲೆಬಾಗಿದ್ದೇನೆ. ಈಗಾಗಲೇ ಟ್ವೀಟ್ ನಲ್ಲಿ ಹೇಳಿದಂತೆ ನಮ್ಮ ಜಿಲ್ಲೆಯ ಜನ ಯಾವುದೇ ಕಾರಣಕ್ಕೂ ಸಂಭ್ರಮಾಚರಣೆ ಮಾಡಬೇಡಿ ಎಂದು ತಿಳಿಸಿದ್ದೇನೆ.ಎಲ್ಲರು ಅದನ್ನು ದಯವಿಟ್ಟು ಪಾಲಿಸಬೇಕು. ಮೆರವಣಿಗೆ ಪಟಾಕಿ ಸಿಡಿಸುವುದು ಮಾಡಬೇಡಿ ಸಂಕಷ್ಟದಲ್ಲಿದ್ದಾಗ ಇದೆಲ್ಲವನ್ನು ಮಾಡಬಾರದು ಅಂತ ನಾನು ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.