ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 5ನೇ ಗ್ಯಾರಂಟಿಯಾಗಿರುವಂತ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ಬಳಿಕ ರಾಜ್ಯದ ಡಿಪ್ಲೋಮಾ, ಪದವೀಧರ ನಿರುದ್ಯೋಗಿ ಫಲಾನುಭವಿಗಳಿಗೆ ಇಂದೇ ಬ್ಯಾಂಕ್ ಖಾತೆಗೆ ಯೋಜನೆ ಹಣ ಜಮಾ ಆಗಲಿದೆ.
ಯುವನಿಧಿಗೆ ಸಿಎಂ ಸಿದ್ಧರಾಮಯ್ಯ ಅಧಿಕೃತವಾಗಿ ಚಾಲನೆ
ಇಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೊಂಬಾಳೆಯನ್ನು ಬಿಡಿಸುವ ಮೂಲಕ ಯುವನಿಧಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಅಲ್ಲದೇ ರಾಷ್ಟ್ರೀಯ ಯುವದಿನವಾದಂತ ಇಂದು ಸ್ವಾಮಿ ವಿವೇಕಾನಂದ ಅವರ ಪೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಯುವನಿಧಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡೋದಕ್ಕೆ ಚಾಲನೆಗೊಳಿಸಿದರು.
ಏನಿದು ಯುವನಿಧಿ.?
ಇಂದು ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿಯನ್ನು ಜಾರಿಗೊಳಿಸಲಾಗಿದೆ. ಇದು ಪದವಿ ಪಡೆದ ನಿರುದ್ಯೋಗಿಗಳಿಗೆ 3000 ರೂ. ಹಾಗೂ ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 1,500 ರೂ. ಭತ್ಯೆಯನ್ನು 2 ವರ್ಷಗಳ ಕಾಲ ನೀಡುವ ಯೋಜನೆಯಾಗಿದೆ.
ಈ ಅವಧಿಯಲ್ಲಿ ಭತ್ಯೆಯ ಜೊತೆಗೆ ಉದ್ಯೋಗ ಲಭಿಸಲು ಬೇಕಾದಂತಹ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ಈ ಎರಡು ವರ್ಷದೊಳಗೆ ಸರ್ಕಾರಿ, ಖಾಸಗಿ ಅಥವಾ ಸ್ವಯಂ ಉದ್ಯೋಗ ದೊರೆತಲ್ಲಿ ಯುವನಿಧಿ ಭತ್ಯೆಯನ್ನು ನೀಡಲಾಗುವುದಿಲ್ಲ. ಕೈಗಾರಿಕೆಗಳಲ್ಲಿ ಬೇಡಿಕೆಯಿರುವ ಕೌಶಲ್ಯದ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿಯ ಅವಧಿಯನ್ನು ಸಂಬಂಧಪಟ್ಟ ಇಲಾಖೆ ನಿರ್ಧರಿಸಲಿದೆ.
ಮನಸೂರೆಗೊಂಡ ಗೀತಗಾಯನ, ಕುಣಿದು ಕುಪ್ಪಳಿಸಿದ ಯುವಜನತೆ
ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ರೂಪಿಸಿರುವ ‘ಯುವನಿಧಿ’ ಯೋಜನೆಯ ನೇರ ನಗದು ವರ್ಗಾವಣೆ ಬೃಹತ್ ಕಾರ್ಯಕ್ರಮದ ವೇದಿಕೆಗೆ ಗಣ್ಯರು ಆಗಮಿಸುವ ಮುನ್ನ ನಾಡಿನ ಹೆಸರಾಂತ ಸಂಗೀತಗಾರರು ನಡೆಸಿಕೊಟ್ಟ ತತ್ವಪದ,ಜನಪ್ರಿಯ ಚಿತ್ರಗೀತೆಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಕ-ಯುವತಿಯರು ಲಯಬದ್ಧವಾಗಿ ಹೆಜ್ಜೆ ಹಾಕಿದ್ದು ಕಾರ್ಯಕ್ರಮದ ಸಂತಸ,ಸಂಭ್ರಮಗಳನ್ನು ನೂರ್ಮಡಿಗೊಳಿಸಿತು.
ಸಂತ ಶಿಶುನಾಳ ಶರೀಫರ ‘ಕೋಡಗನ್ನ ಕೋಳಿ ನುಂಗಿತ್ತ’ ,”ತರವಲ್ಲ ತಗೀ ನಿನ್ನ ತಂಬೂರಿ ಸ್ವರ” ತತ್ವಪದಗಳು ಅಜಯ್ ವಾರಿಯರ್ ಮತ್ತು ತಂಡದವರಿಂದ ಅನುರಣಿಸಿದವು, ಸಂತೋಷದೇವ್ ಅವರು ಹಾಡಿದ “ಬೆಳ್ಳಿ ಮೂಡಿತೋ ಕೋಳಿ ಕೂಗಿತೋ” ಡಾ.ರಾಜ್ ಅಭಿನಯದ ಗೀತೆಗೆ ನೆರೆದ ಜನ ಕುಣಿದು ಕುಪ್ಪಳಿಸಿತು, ಅನುರಾಧಭಟ್ ಅವರು “ಅಪ್ಪ ಐ ಲವ್ ಯೂ” , “ಕಣ್ಣು ಹೊಡಿಯಾಕ ಮೊನ್ನೆ ಕಲತನೀ….” ಹಾಡುಗಳು ಕೇಳುಗರ ಮನಗೆದ್ದವು.ಸಮೂಹ ವೃಂದಗಾನದಲ್ಲಿ ಮೂಡಿ ಬಂದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡು ಸಭಾಮಂಟಪದಲ್ಲಿ ಸಂಚಲನ ಉಂಟು ಮಾಡಿತು.”ಗೊಂಬೆ ಹೇಳುತೈತೆ ಮತ್ತೆ ಹೇಳುತೈತೇ ನೀನೆ ರಾಜಕುಮಾರ” ಗೀತೆಯು ಯುವಸಮೂಹವನ್ನು ಭಾವಪರವಶರನ್ನಾಗಿಸಿತು.ಸಾವಿರಾರು ಯುವಜನರು ತಮ್ಮ ಮೊಬೈಲ್ಗಳ ಟಾರ್ಚ್ ಬೆಳಗಿ ಡಾ.ಪುನೀತ್ ರಾಜ್ಕುಮಾರ್ ಅವರಿಗೆ ಸಮಾರಂಭದಿಂದಲೇ ಗೌರವ ಸೂಚಿಸಿದ್ದು ವಿಶೇಷವಾಗಿತ್ತು.
ಡಾ.ಅನೀಶ್ ವಿದ್ಯಾಶಂಕರ್ ಅವರು ವಯೋಲಿನ್ನಲ್ಲಿ ಕನ್ನಡ ಚಿತ್ರಗೀತೆಗಳ ನಾದಸುಧೆ ಹರಿಸಿದರು.
ರಾಮ ಮಂದಿರ ‘ಪ್ರಾಣ’ ಪ್ರತಿಷ್ಠಾಪನೆ: 11 ದಿನಗಳ ವಿಶೇಷ ಸಂದೇಶ ಬಿಡುಗಡೆ ಮಾಡಿದ ‘ಪ್ರಧಾನಿ ಮೋದಿ’
ಕಲಬುರ್ಗಿಯಲ್ಲಿ ‘KSRTC ಬಸ್-ಬೈಕ್’ ನಡುವೆ ಭೀಕರ ಅಪಘಾತ: ‘ಇಬ್ಬರು ಸವಾರ’ರು ಸ್ಥಳದಲ್ಲೇ ಸಾವು