ಬೆಂಗಳೂರು: ಕೇಂದ್ರ ಸರ್ಕಾರದಿಂದ ಒಂದು ರಾಷ್ಟ್ರ ಒಂದು ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಇ-ವಿಧಾನ್ ನೇವಾ ಯೋಜನೆಯನ್ನು ಜಾರಿಗೆ ತಂದಿದೆ. ಆದ್ರೇ ಈ ಯೋಜನೆಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದಲೇ ಹಣ ಕರ್ಚು ಮಾಡಿ, ಅಳವಡಿಸುತ್ತಿರುವುದು ಸರಿಯಲ್ಲ. ರಾಜ್ಯ ಬೊಕ್ಕಸದ ಹಣ ಕರ್ಚು ಮಾಡದೇ, ಕೇಂದ್ರ ಸರ್ಕಾರದ ಹಣದೊಂದಿಗೆ ಅನುಷ್ಠಾನಕ್ಕೆ ತರುಬೇಕು. ಈ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿ ಧ್ವನಿ ಎತ್ತಿ, ಮಾತನಾಡುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು( Farmer MLC Ramesh Babu ), ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಈ ಕುರಿತಂತೆ ಪತ್ರ ಬರೆದಿರುವಂತ ಅವರು, ಕರ್ನಾಟಕ ವಿಧಾನ ಮಂಡಲವನ್ನು ಕಾಗದರಹಿತ ಯೋಜನೆಯ ಅಡಿಯಲ್ಲಿ ತರಲು ಕೇಂದ್ರ ಸರ್ಕಾರದ ಇ-ವಿಧಾನ್ (ನೇವಾ ಯೋಜನೆ) ಅನುಷ್ಠಾನಗೊಳಿಸಿ ಒಂದು ರಾಷ್ಟ್ರ – ಒಂದು ವಿಧಾನ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲು ಈ ಹಿಂದೆ ತೀರ್ಮಾನಿಸಲಾಗಿತ್ತು. 2017-18ರ ಆಯವ್ಯಯದಲ್ಲಿ ಇ-ವಿಧಾನ್ ಜಾರಿಗೊಳಿಸಲು ಪ್ರಾಥಮಿಕವಾಗಿ ತಾವು 60 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿ ಅದರಲ್ಲಿ 20ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಿರಿ. ಈ ಸಂಬಂಧ ಕೇಂದ್ರ ಸರ್ಕಾರದ ಇಲಾಖೆಗಳೊಂದಿಗೆ ಸಮನ್ವಯ ಮೂಡಿಸಿ, ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ನೇವಾ ಯೋಜನೆಯನ್ನು ರಾಜ್ಯದ ವಿಧಾನ ಮಂಡಲದಲ್ಲಿ ಅಳವಡಿಸಿಕೊಳ್ಳಬೇಕಾಗಿತ್ತು ಎಂದಿದ್ದಾರೆ.
‘ನಮ್ಮ ಕ್ಲಿನಿಕ್’ ಮೇಲ್ದರ್ಜೆಗೇರಿಸಲು ಮುಂದಿನ ‘ಬಜೆಟ್’ನಲ್ಲಿ ಅನುದಾನ – ಸಿಎಂ ಬೊಮ್ಮಾಯಿ | Namma Clinic
15-10-2015ರಲ್ಲಿ ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯು ಇ-ವಿಧಾನ್ ಜಾರಿಗೊಳಿಸಲು ರಾಜ್ಯದೊಂದಿಗೆ ಪತ್ರ ವ್ಯವಹಾರ ಮಾಡಿರುತ್ತದೆ. 18-18-2018ರಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯದಲ್ಲಿ ಇ-ವಿಧಾನ್ ಅಳವಡಿಸಿಕೊಳ್ಳುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ. ರಾಜ್ಯದಲ್ಲಿ ಕಾಗದರಹಿತ ಆಡಳಿತವಾದ ಇ-ವಿಧಾನ್ ಯೋಜನೆಯನ್ನು ನೇವಾ ಮುಖಾಂತರ ಜಾರಿಗೊಳಿಸುವ ಸಂಬಂಧ ಅನೇಕ ಪತ್ರ ವ್ಯವಹಾರಗಳು ನಡೆದಿದ್ದು, ಕೇಂದ್ರ ಸರ್ಕಾರದ ಶೇಕಡ 60ರ ಅನುದಾನದ ಮೂಲಕ ಸದರಿ ಯೋಜನೆ ಜಾರಿಯಾಗಬೇಕಾಗಿತ್ತು, ಆದರೆ ವಿಧಾನ ಮಂಡಲದ ಕೆಲವು ಅಧಿಕಾರಿಗಳು ಕೇಂದ್ರ ಸರ್ಕಾರದ ಅನುದಾನದ ಯೋಜನೆಯನ್ನು ಕೈಬಿಟ್ಟು ರಾಜ್ಯ ಸರ್ಕಾರವೇ ತನ್ನ ಸ್ವಂತ ಹಣವನ್ನು ತೊಡಗಿಸಿ ಸುಮಾರು 254 ಕೋಟಿ ರೂಪಾಯಿಗಳ ಯೋಜನೆಯನ್ನು ಜಾರಿ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಸದರಿ ಪ್ರಯತ್ನವು ಹಲವಾರು ಅನುಮಾನಗಳಿಗೆ ಅವಕಾಶ ಕೊಟ್ಟಿದ್ದು, ಕೇಂದ್ರ ಸರ್ಕಾರದ ಅನುದಾನವನ್ನು ಕೈಬಿಟ್ಟು ರಾಜ್ಯ ಸರ್ಕಾರದ ಹಣವನ್ನು ಪೋಲು ಮಾಡುವ ಹಿಂದೆ ಭ್ಟಷ್ಟಾಚಾರದ ಅನುಮಾನಗಳು ಹುಟ್ಟಿರುತ್ತವೆ. ಮಾನ್ಯ ವಿರೋಧ ಪಕ್ಷದ ನಾಯಕರಾಗಿ ಕರ್ನಾಟಕದ ಹಿತದೃಷ್ಟಿಯಿಂದ 09-12-2021ರಲ್ಲಿ ತಾವು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸದರಿ ಯೋಜನೆಯನ್ನು ಪುನರ್ ಪರಿಶೀಲಿಸುವಂತೆ ಆಗ್ರಹ ಮಾಡಿರುತ್ತೀರಿ ಎಂದು ಹೇಳಿದ್ದಾರೆ.
ಉದ್ದೇಶಿತ ಯೋಜನೆಯಲ್ಲಿ ರಾಜ್ಯ ಸರ್ಕಾರವೇ ಹಣವನ್ನು ವಿನಿಯೋಗಿಸಿದರೆ, ಸಾರ್ವಜನಿಕರ ಹಣವು ಪೋಲಾಗುವ ಸಾಧ್ಯತೆಗಳಿದ್ದು ರಾಜ್ಯದ ಹಿತದೃಷ್ಟಿಯಿಂದ ಇದನ್ನು ತಡೆಯುವುದು ಅವಶ್ಯಕವಾಗಿರುತ್ತದೆ. ಆದ ಕಾರಣ ತಾವು ದಯಮಾಡಿ ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲಿ ನಿಯಮ 69ರ ಅಡಿಯಲ್ಲಿ ಸದರಿ ವಿಷಯವನ್ನು ಚರ್ಚೆಗೆ ತೆಗೆದುಕೊಂಡು, ರಾಜ್ಯ ಸರ್ಕಾರವೇ ಸಂಪೂರ್ಣ ಹಣ ಇ-ವಿಧಾನ್ ಯೋಜನೆಗೆ ತೊಡಗಿಸುವ ಬದಲು ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ಯೋಜನೆಯನ್ನು ಜಾರಿಗೊಳಿಸಲು ಮತ್ತು ಈ ಯೋಜನೆಯಲ್ಲಿ ಅಕ್ರಮ ಎಸಗಲು ಮುಂದಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸಲು ಕೋರಿದ್ದಾರೆ.