ಶಿವಮೊಗ್ಗ: ಇಂದು ಸೊರಬ ತಾಲೂಕಿನ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ( Ulavi Primary Health Center ) ರಕ್ತದಾನ ಶಿಬಿರ ( Blood Camp ) ನಡೆಯಿತು. ಈ ಶಿಬಿರದಲ್ಲಿ ಅತೀ ಹೆಚ್ಚು ರಕ್ತದಾನಿಗಳು ಭಾಗವಹಿಸಿ, ರಕ್ತದಾನ ಮಾಡಿದ್ದರಿಂದಾಗಿ ತಾಲೂಕಿನಲ್ಲಿಯೇ ಹೊಸ ದಾಖಲೆಯನ್ನು ಬರೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉಳವಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಜೀವನ್ ಉದ್ಘಾಟನೆ ಮಾಡಿದರು. ಈ ಬಳಿಕ ಮಾತನಾಡಿದಂತ ಅವರು, ಈ ಹಿಂದೆಯೇ ಈ ಕಾರ್ಯಕ್ರಮ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಆದ್ರೇ ಸಾಧ್ಯವಾಗಿರಲಿಲ್ಲ. ಈಗ ಗ್ರಾಮ ಪಂಚಾಯ್ತಿ, ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ನಡೆಯುತ್ತಿದೆ. ಸಾರ್ವಜನಿಕರು ರಕ್ತದಾನ ಶಿಬಿರದಂತ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ದೂಗೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಫಯಾಸ್ ಮಾತನಾಡಿ, ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮ ಪದೇ ಪದೇ ನಡೆಯುವಂತೆ ಆಗಲಿ. ನಾವು, ನೀವು ಸೇರಿ ಮಾಡೋಣ ಎಂದು ಹೇಳಿದರು.
ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಮಾತನಾಡಿ, ಬೃಹತ್ ರಕ್ತದಾನ ಶಿಬಿರಕ್ಕಾಗಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಕಳೆದ ಒಂದು ವಾರದಿಂದ ತಯಾರಿ ನಡೆಸಿದ್ದಾರೆ. ಮುಂದೆಯೂ ಇಂತಹ ಕಾರ್ಯಕ್ರಮ ನಡೆಯಲಿ. ಈ ಕಾರ್ಯಕ್ರಮಕ್ಕೆ ನೆರವಾದಂತ ಲಯನ್ಸ್ ಕ್ಲಬ್, ದೂಗೂರು, ನಿಸ್ಸಾರಾಣಿ, ಉಳವಿ ಗ್ರಾಮ ಪಂಚಾಯತಿಯ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದರು.
ಈ ಬಳಿಕ ಮಾತನಾಡಿದಂತ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತುಳಸಿ ಅವರು, ಈ ಕಾರ್ಯಕ್ರಮ ಯಶಸ್ವಿಯಾಗಲಿ. ಸದಾ ನಮ್ಮ ಸಹಕಾರ ಇರಲಿದೆ ಎಂದು ತಿಳಿಸಿದರು.
ಅಂದಹಾಗೇ ಇಂದು ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಂತ ರಕ್ತದಾನ ಶಿಬಿರದಲ್ಲಿ 66 ರಕ್ತದಾನಿಗಳು ರಕ್ತವನ್ನು ದಾನ ಮಾಡಿದ್ದಾರೆ. ಈ ಮೂಲಕ ಸೊರಬ ತಾಲೂಕಿನಲ್ಲಿಯೇ ಅತೀ ಹೆಚ್ಚು ರಕ್ತದಾನಿಗಳು ರಕ್ತ ನೀಡಿದ ದಾಖಲೆಯನ್ನು ಬರೆದಿದೆ.
ಈ ಕಾರ್ಯಕ್ರಮದಲ್ಲಿ ಹಿರಿಯ ಲ್ಯಾಬ್ ಟೆಕ್ನೀಷಿಯನ್ ಚಂದ್ರನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಪವಾರ್, ಡಾ.ದಿಲೀಪ್, ಸಿಮ್ಸ್ ಮೆಡಿಕಲ್ ಆಫೀಸರ್, ಹೊಸಬಾಳೆ ವೈದ್ಯಾಧಿಕಾರಿ ಡಾ.ಹರೀಶ್, ಸೊರಬ ತಾಲೂಕು ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ನಾಗರಾಜ್, ಉಳವಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರವೀಣ್, ಹಿರಿಯ ಶ್ರುಶ್ರೂಷಾಧಿಕಾರಿ ಜಯಲಕ್ಷ್ಮೀ, ಎಲ್ ಹೆಚ್ ವಿ ಬಂಗಾರಮ್ಮ ಸೇರಿದಂತೆ ಉಳವಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ