ಬೆಂಗಳೂರು: ನಗರದ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಸುಮಾರು 53ಕ್ಕೂ ಹೆಚ್ಚು ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಮುಖ ನಾಯಕರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ( JDS Party ) ಸೇರ್ಪಡೆಯಾದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಲ್ಲ ನಾಯಕರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಳ್ಳಲಾಯಿತು. ಚಾಮರಾಜಪೇಟೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ರಾಜು, ಮಾಜಿ ಉಪ ಮೇಯರ್ ಶ್ರೀರಾಮೇಗೌಡ, ಪಾಲಿಕೆಯ ಮಾಜಿ ಸದಸ್ಯರಾದ ಗೌರಮ್ಮ, ಕಾಂಗ್ರೆಸ್ ಪಕ್ಷದ ನಾಯಕರಾದ ಶೇಖರ್, ದೊರೆ ಸೇರಿ 53ಕ್ಕು ಹೆಚ್ಚು ವಿವಿಧ ಪಕ್ಷಗಳ ಮುಖಂಡರು ಪಕ್ಷವನ್ನು ಸೇರಿದರು.
ಸಚಿವ ಶ್ರೀರಾಮುಲು ಭ್ರಷ್ಟಾಚಾರದಲ್ಲೂ ‘PHD’ ಮಾಡಿದ್ದಾರೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
ಈ ವೇಳೆ ಮಾತನಾಡಿದಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ( Farmer CM HD Kumaraswamy ), ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.
ಸೇರ್ಪಡೆ ಸಭೆಯಲ್ಲಿ ಮಾತನಾಡಿದ ಅವರು; ಕೆಲವರು ಹಣ ಹಂಚಿ ಗೆಲ್ಲಲು ಹೊರಟಿದ್ದಾರೆ. ಆದರೆ, ಅವರು ಹಂಚುವ ಹಣ ಎಲ್ಲಿಂದ ಬರುತ್ತದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.
ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆಯೇ ಜೆಡಿಎಸ್ ಗೆಲ್ಲುವ ಮೊದಲ ಕ್ಷೇತ್ರ ಆಗಲಿದೆ. ಗುಜರಾತ್ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಯಾವೆಲ್ಲ ತಂತ್ರ ಮಾಡ್ತಾ ಇವೆ ಎನ್ನುವುದು ಗೊತ್ತಿದೆ. ಆದರೂ ಬಿಜೆಪಿ-ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಗ್ರಾಫ್ ಮೇಲೆ ಹೋಗುತ್ತಿದೆ. ಪಂಚರತ್ನ ಕಾರ್ಯಕ್ರಮದ ಮೂಲಕ ಅದು ಗೊತ್ತಾಗಿದೆ ಎಂದು ಅವರು ಹೇಳಿದರು.
ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನಾಳೆ ಬಳ್ಳಾರಿಯಲ್ಲಿ ಉದ್ಯೋಗ ಮೇಳ ಆಯೋಜನೆ |JOB FAIR
ಇಂದು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಆಂತರಿಕ ಸಮೀಕ್ಷೆ ನಡೆಸ್ತಾ ಇವೆ. ಪ್ರತಿ ಎರಡು ತಿಂಗಳಿಗೆ ಒಂದು ಕಾರ್ಯತಂತ್ರ ಮಾಡ್ತಾ ಇವೆ. ಬಿಜೆಪಿಯ ಆಂತರಿಕ ಸರ್ವೆ ಪ್ರಕಾರ ಜೆಡಿಎಸ್ 55 ಸ್ಥಾನ ಗೆಲ್ಲಲಿದೆ ಎನ್ನುತ್ತಿದ್ದಾರೆ. ನಾವು ಗೆಲ್ಲೋದು ಬರಿ 55 ಅಲ್ಲ. 123 ಸ್ಥಾನ ಗೆಲ್ಲುತ್ತೇವೆ. ಅವರ ಪಾಪದ ಕೊಡ ತುಂಬುತ್ತಿದೆ. ಅವರನ್ನು ಎದುರಿಸೋಕೆ ನಿಮ್ಮ ಶಕ್ತಿ ಸಾಕು. ಯಾರಾದರೂ ನಮ್ಮ ಕಾರ್ಯಕರ್ತರನ್ನು ಪೊಲೀಸರನ್ನು ಬಿಟ್ಟು ಹೆದರಿಸಿದ್ರೆ ನನ್ನ ಗಮನಕ್ಕೆ ತನ್ನಿ. ಉಳಿದಿದ್ದನ್ನು ನಾನು ನೋಡ್ಕೊತೇನೆ ಎಂದು ಅವರು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ಮಾಡುತ್ತಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಎಲ್ಲ ಕಡೆ ಪಕ್ಷಕ್ಕೆ ಹೆಚ್ಚು ಶಕ್ತಿ ಬರುತ್ತಿದೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕಿವಿಮಾತು ಹೇಳಿದರು.
ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತುಂಬಾ ಬೆಳವಣಿಗೆಗಳು ನಡೆಯುತ್ತಿವೆ. ನಾವು ನಮ್ಮ ಪಾಡಿಗೆ ಪಕ್ಷ ಕಟ್ಟುವ ಕೆಲಸ ಮಾಡಬೇಕು. ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ನಗರ ಘಟಕದ ಅಧ್ಯಕ್ಷ ಆರ್ ಪ್ರಕಾಶ್, ಪಕ್ಷಕ್ಕೆ ಸೇರ್ಪಡೆಯಾದ ಗೋವಿಂದರಾಜು, ಶ್ರೀರಾಮೇಗೌಡ ಸೇರಿದಂತೆ ಹಲವಾರು ಗಣ್ಯರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಪಕ್ಷದ ಇನ್ನಿತರೆ ಹಿರಿಯ ನಾಯಕರು ಹಾಜರಿದ್ದರು.