ಶಿವಮೊಗ್ಗ: ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಂತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿಯ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದರು. ಇಂತಹ ಕಾರ್ಯಕರ್ತನ ಮನೆಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಭೇಟಿ ನೀಡಿ, 10 ಲಕ್ಷ ನೆರವಿನ ಚೆಕ್ ವಿತರಿಸಿದರು.
ಭಾರತ್ ಜೋಡೋ ಯಾತ್ರೆ ವೇಳೆ ಹಿರಿಯೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತ್ಯಾಗರ್ತಿ ಹೋಬಳಿ ಹುತ್ತದಿಂಬ ಗ್ರಾಮದ ರಮೇಶ್ ಅವರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶುಕ್ರವಾರದ ಇಂದು ಭೇಟಿ ನೀಡಿದರು.
ಮೃತ ಕಾರ್ಯಕರ್ತ ರಮೇಶ್ ನಿಧನದಿಂದಾಗಿ ದುಖದಲ್ಲಿದ್ದಂತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಲ್ಲದೇ ಮೃತ ಕಾಂಗ್ರೆಸ್ ಕಾರ್ಯಕರ್ತ ರಮೇಶ್ ಅವರ ಪತ್ನಿ ಜಯಮ್ಮ ಅವರಿಗೆ 10 ಲಕ್ಷ ರೂಪಾಯಿ ನೆರವಿನ ಚೆಕ್ ನೀಡಿದರು.
ಈ ವೇಳೆ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಡಿಸಿಸಿ ಅಧ್ಯಕ್ಷ ಸುಂದರೇಶ್ ಮತ್ತಿತರರು ಇದ್ದರು.