ಬೆಂಗಳೂರು : ಬುದ್ಧ, ಬಸವ, ಅಂಬೇಡ್ಕರ್ ವಾಲ್ಮೀಕಿ ನಮಗೆ ಆದರ್ಶ ಹಾಗೂ ಪ್ರೇರಣೆ. ನಮ್ಮ ತೀರ್ಮಾನಗಳಿಗೆ ಈ ಮಹನೀಯರ ಬದುಕು, ವಿಚಾರಧಾರೆಯನ್ನು ಕೇಳಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನಾಗಸೇನಾ ವಿದ್ಯಾಲಯದಲ್ಲಿ ಬುದ್ಧ, ಅಂಬೇಡ್ಕರ್ ಮಂಟಪವನ್ನು ಉದ್ಘಾಟಿಸಿ, ಡಾ: ಬಿ.ಆರ್.ಅಂಬೇಡ್ಕರ್ ಅವರ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಇವರೆಲ್ಲರೂ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದರಿಂದ ಅವರು ಶಾಶ್ವತವಾಗಿರುತ್ತಾರೆ. ಆದರ್ಶಗಳನ್ನು ಬಿಡದವರು ಶಾಶ್ವತವಾಗಿರುತ್ತಾರೆ. ಆದರ್ಶಗಳನ್ನು ಬಿಟ್ಟವರು ಕಾಲಸೀಮಿತವಾಗಿರುತ್ತಾರೆ ಎಂದರು.
ನಾಗಸೇನಾ ವಿದ್ಯಾಲಯಕ್ಕೆ ಅಗತ್ಯ ಅನುದಾನ
ನಾಗಸೇನಾ ವಿದ್ಯಾಲಯಕ್ಕೆ ಅಗತ್ಯ ಅನುದಾನವನ್ನು ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದ ಮುಖ್ಯಮಂತ್ರಿಗಳು ನಾನು ಒಬ್ಬ ಅಂಬೇಡ್ಕರ್, ಬುದ್ದ, ಬಸವ, ವಾಲ್ಮೀಕಿ ಭಕ್ತ. ಅಂಬೇಡ್ಕರ್ ಅವರ ಇಚ್ಛೆಯಂತೆ ಸಂಸ್ಥೆ ಬೆಳೆದಿದೆ. ಇದು ಇನ್ನಷ್ಟು ಬೆಳೆಯಬೇಕು. ಇಲ್ಲಿ ಪ್ರಸ್ತಾಪಿಸಿರುವ 2-3 ವಿಚಾರಗಳಿಗೆ ಸಂಪೂರ್ಣ ಸಹಮತ ಮತ್ತು ಬೆಂಬಲ ನೀಡಲಾಗುವುದು ಸಂಸ್ಥೆಗೆ ಅಗತ್ಯವಿರುವ ಅನುದಾನವನ್ನು ಮುಂದಿನ ವರ್ಷ ಪಿಯುಸಿ ಅದರ ಮುಂದಿನ ವರ್ಷ ಪದವಿ ಕೋರ್ಸುಗಳು ಪ್ರಾರಂಭ ಮಾಡಬೇಕೆಂಬ ಷರತ್ತಿ ಮೇಲೆ ಬಿಡುಗಡೆ ಮಾಡಲಾಗುವುದು ಎಂದರು.
ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿರುವ ಸಂಸ್ಥೆ ಇನ್ನೂ ಬೆಳೆಯಬೇಕು. ಕೇಂದ್ರ ಸಚಿವ ರಾಮದಾಸ್ ಅಟಾವಳೆ ಅವರು ಸಹ ಇದಕ್ಕೆ ಬೆಂಬಲ ನೀಡುವರು ಎಂದರಲ್ಲದೆ, ಸರ್ಕಾರ ಎಸ್.ಸಿ. ಎಸ್.ಪಿ ಟಿ.ಎಸ್ಪಿ ಯೋಜನೆಯಡಿ 100 ಅಂಬೇಡ್ಕರ್ ಹಾಸ್ಟೆಲ್ ಗಳನ್ನು ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಈ ಪೈಕಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಮಾಡಿಕೊಡುವುದಾದರೆ ಒಂದು ಹಾಸ್ಟೆಲ್ ನ್ನು ಈ ಆವರಣದಲ್ಲಿ ನಿರ್ಮಿಸಲಾಗುವುದು. ಅಂಬೇಡ್ಕರ್ ಅವರ ಜೀವನಚರಿತ್ರೆ ಬಿಂಬಿಸುವ ವಸ್ತುಸಂಗ್ರಹಾಲಯ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರದ ಯೋಜನೆಯಡಿ ಅಂಬೇಡ್ಕರ್ ಭೇಟಿ ನೀಡಿದ ಹತ್ತು ಸ್ಥಳಗಳ ಅಭಿವೃದ್ದಿ ಪಡಿಸುತ್ತಿದ್ದು, ಅದರಲ್ಲಿ ನಾಗಸೇನಾ ವಿದ್ಯಾಲಯಕ್ಕೂ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಆದರ್ಶ ಜೀವನ ನಡೆಸಬೇಕೆಂದು ತಿಳಿಸಿದರು.
BIGG NEWS: ಲವ್ ಜಿಹಾದ್ ಆರೋಪ; ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ಅರೆಸ್ಟ್
ಬುದ್ಧ ಅಂತ:ಕರಣದ ಪ್ರತೀಕ
ಪೀಪಲ್ಸ್ ಎಜುಕೇಷನ್ ಸೊಸೈಟಿಯನ್ನು ಅಂಬೇಡ್ಕರ್ ಸ್ಥಾಪನೆ ಮಾಡಿದ್ದಾರೆ. ಅಂತಹ ಸಂಸ್ಥೆ ನಮ್ಮ ಬೆಂಗಳೂರಿನಲ್ಲಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಜಗತ್ತಲ್ಲಿ ಮಾನವ ಮನುಷ್ಯನಾಗಿ ಹುಟ್ಟುತ್ತಾರೆ. ಕೆಲವರು ಮಾತ್ರ ಮಾನವರಾಗುತ್ತಾರೆ. ಮನುಷ್ಯರಾಗಿ ಹುಟ್ಟಿ ಕೆಲವರು ದೇವರಾಗುತ್ತಾರೆ. ನ್ಯಾಯ ನೀತಿ, ಧರ್ಮ, ಸತ್ಯ, ಅಹಿಂಸೆ,ಪ್ರೀತಿ, ವಿಶ್ವಾಸಗಳ ಸಂಕೋಲೆಯಲ್ಲಿ ಸಿಕ್ಕವನು ಮಾನವ. ಬುದ್ಧ ಜಾಗೃತಿಯ ಪ್ರತೀಕ. ಬುದ್ಧನಿಗೆ ಸಮಾಜದಲ್ಲಿರುವ ದು:ಖ, ದುಮ್ಮಾನಗಳನ್ನು ನೋಡಿ ಅಂತರಂಗದಲ್ಲಿ ಜಾಗೃತಿಯಾಯಿತು. ಮುಂದೆ ಆತ ತ್ಯಾಗದ ಪ್ರತೀಕ, ಜ್ಞಾನದ ಪ್ರತೀಕ, ಇಡಿ ವಿಶ್ವದಲ್ಲಿ ಅಂತ:ಕರಣದ ಪ್ರತೀಕವಾಗಿದ್ದಾನೆ. ಬುದ್ದನನ್ನು ಜಗತ್ತಿನ ಎಲ್ಲಾ ದೇಶಗಳಲ್ಲಿ ಪ್ರೀತಿಸುತ್ತಾರೆ. ಅಮೇರಿಕಾದ ಅಧ್ಯಕ್ಷರ ಕಚೇರಿಯಲ್ಲಿ ಬುದ್ಧನ ಪ್ರತಿಮೆಯಿದೆ. ಬುದ್ಧ ಶ್ರೇಷ್ಠ ದೇವಮಾನವ ಎಂದರು.
ಬಸವಣ್ಣ ಜಾಗೃತಿಯ ಪ್ರತೀಕ
ಬಸವಣ್ಣ ಕೂಡ ಜಾಗೃತಿಯ ಪ್ರತೀಕ. ಜಾಗೃತಿಯ ಜೊತೆಗೆ ವ್ಯವಸ್ಥೆಯ ವಿರುದ್ದ ಸಿಡಿದೆದ್ದು, ಹೊಸ ಮನ್ವಂತರವನ್ನು ಹಾಡಿದರು. ಸಮಾಜದಲ್ಲಿ ಸಮಾನತೆಯ ಪ್ರತೀಕ ಬಸವಣ್ಣ. ಧರ್ಮಕ್ಕೆ ಅತ್ಯಂತ ಸೂಕ್ತ ವ್ಯಾಖ್ಯಾನವಾದ ದಯವೇ ಧರ್ಮದ ಮೂಲ ಎಂದು ವಿಶ್ವ ಮಾನವರಾದರು. ಅಂಬೇಡ್ಕರ್ ಅವರು ಜ್ಞಾನ, ಜಾಗೃತಿ, ಸಮಾನತೆ, ತ್ಯಾಗದ ಹಾಗೂ ಭಾರತ ದೇಶದ ಭವ್ಯ ಭವಿಷ್ಯವನ್ನು ಬರೆದ ಧೀಮಂತ. ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ, ಈ ಸಮಾಜದಲ್ಲಿ ಶಾಂತಿ ಸೌಹಾರರ್ದತೆ ಇರುತ್ತಿರಲಿಲ್ಲ. ಶಾಂತಿ, ಸೌಹಾರ್ದತೆ ಇದ್ದರೆ ಮಾತ್ರ ಪ್ರಗತಿಯಾಗಲು ಸಾಧ್ಯ. ಅದಕ್ಕೆ ಸಂಪೂರ್ಣವಾದ, ಅದ್ಭುತವಾದ ಕಾನೂನಿನ ಸ್ವರೂಪದ ಸಂವಿಧಾನವನ್ನು ನಮಗೆ ಕೊಟ್ಟಿದ್ದು. ಇದನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ, ಸೂರ್ಯಚಂದ್ರ ಇರುವವರೆಗೂ ಅಂಬೇಡ್ಕರ್ ಹೆಸರು ಶಾಶ್ವತವಾಗಿರುತ್ತದೆ ಎಂದರು.
ಪರಿವರ್ತನೆಯ ಪ್ರತೀಕ
ವಾಲ್ಮಿಕಿ ಪರಿವರ್ತನೆಯ ಪ್ರತೀಕ. ತನ್ನ ಹಿಂದಿನ ಜೀವನವನ್ನು ಬದಲಾಯಿಸಿಕೊಂಡು ಮರ್ಹರ್ಷಿಯಾದರು. ವಾಲ್ಮೀಕಿ ರಾಮಾಯಣದ ಮುಖಾಂತರ ನ್ಯಾಯ, ನೀತಿ, ಧರ್ಮವನ್ನು ಸ್ವಷ್ಟವಾಗಿ ವ್ಯಾಖ್ಯಾನ ಮಾಡಿದ್ದಾರೆ. ವಾಲ್ಮೀಕಿ ಇರದಿದ್ದರೆ ರಾಮಾಯಣ ಇಷ್ಟು ಸುಂದರವಾದ, ಆದರ್ಶವಾದ ರಾಮಾಯಣ ಇರುತ್ತಿರಲಿಲ್ಲ. ಭೂಮಿಯ ಮೇಲೆ ಮಾನವನ ಜನ್ಮವಿರುವವರೆಗೂ ಶಾಶ್ವತವಾಗಿ ಎಲ್ಲರ ಮನದಾಳದಲ್ಲಿ ಈ ನಾಲ್ಕೂ ಜನ ಇರುತ್ತಾರೆ ಎಂದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಟಾವಲೆ, ನಾಗಸೇನಾ ವಿದ್ಯಾಲಯದ ಅಧ್ಯಕ್ಷ ಡಾ: ಎಂ.ವೆಂಕಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.