ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲಾ ( Primary School ) ವಿದ್ಯಾರ್ಥಿಗಳಿಗೆ ಮಾರಕವಾಗುವ ಮತ್ತು ಶೈಕ್ಷಣಿಕ ಗುಣಮಟ್ಟದ ಕುಸಿತಕ್ಕೆ ಕಾರಣವಾಗಬಹುದಾದ ಉದ್ದೇಶಿತ 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ( Public Exam ) ಕೈಬಿಡುವಂತೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ( Former council member Ramesh Babu ) ಆಗ್ರಹಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವವರಿಗೆ ( Chief Minister Basavaraj Bommai ) ಸುಧೀರ್ಘ ಪತ್ರ ಬರೆದಿರುವಂತ ಮಾಜಿ MLC ರಮೇಶ್ ಬಾಬು ಅವರು, ಕಳೆದ ಒಂದು ವರ್ಷದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ಗೊಂದಲಮಯ ನೀತಿಗಳಿಂದ ಪದೇ ಪದೇ ಸುದ್ದಿಯಾಗುತ್ತಿದೆ. ಮಕ್ಕಳಿಗೆ ಕಾಲಮಿತಿಯೊಳಗೆ ಸಮವಸ್ತç ವಿತರಣೆಯ ವೈಫಲ್ಯ, ಶೂ-ಸಾಕ್ಸ್ ವಿತರಣೆಯ ವೈಫಲ್ಯ, ಶೈಕ್ಷಣಿಕ ವರ್ಷದ ವೇಳಾಪಟ್ಟಿಯ ಏರು ಪೇರು, ಪರೀಕ್ಷಾ ಪ್ರಶ್ನೆ ಪತ್ರಿಕೆಯ ಗೊಂದಲ, ಪಠ್ಯಪುಸ್ತಕ ಪರಿಷ್ಕರಣೆಯ ವಿವಾದ, ಶಿಕ್ಷಕರ ವರ್ಗಾವಣೆಯ ನೀತಿ, ಶೈಕ್ಷಣಿಕ ವರ್ಷದ ದಾಖಲಾತಿಯ ನಂತರ ಮೊದಲ ವರ್ಷದ ಪ್ರವೇಶಕ್ಕೆ ವಯೋಮಿತಿ ನಿಗದಿ, ಶಿಕ್ಷಕರ ನೇಮಕಾತಿಯ ವಿಳಂಬ, ಪದೋನ್ನತಿಯಲ್ಲಿ ಅವೈಜ್ಞಾನಿಕ ನೀತಿ, ಖಾಸಗಿ ಶಾಲೆಗಳ ಖಾಲಿ ಹುದ್ದೆ ತುಂಬಲು ನಿಧಾನಗತಿ, ಖಾಸಗಿ ಶಾಲೆಗಳ ಅನುದಾನದ ತಡೆ ಮುಂತಾದ ನಿರಂತರ ವೈಫಲ್ಯಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಯಲು ಮಾಡುತ್ತಿದೆ. ಇದರ ಮುಂದುವರೆದ ಭಾಗವಾಗಿ ಪ್ರಾಥಮಿಕ ಶಾಲೆಗಳ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುವುದಾಗಿ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಪ್ರಕಟಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟು ಮಾಡುತ್ತಿದೆ ಎಂದಿದ್ದಾರೆ.
ಕಲಿಕಾ ಗುಣಮಟ್ಟದ ಹೆಸರಿನಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲು ಯತ್ನಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಅಕ್ಟೋಬರ್ 12ರಂದು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿ ನಂತರ ಪಬ್ಲಿಕ್ ಪರೀಕ್ಷೆಯ ಕುರಿತು ಆದೇಶ ಹೊರಡಿಸಿರುವುದಾಗಿ ತಿಳಿಸಿರುತ್ತದೆ. ಈ ಹಿಂದೆ ಸಾರ್ವಜನಿಕ ವಲಯದಿಂದ ಪಬ್ಲಿಕ್ ಪರೀಕ್ಷೆಗೆ ಪ್ರತಿರೋದ ಬಂದಾಗ, ಶಿಕ್ಷಣ ಇಲಾಖೆಯು ಇದೇ ಪರೀಕ್ಷೆಯನ್ನು “ಮೌಲ್ಯಾಂಕನ ಪರೀಕ್ಷೆ” ಹೆಸರಿನಲ್ಲಿ ನಡೆಸುವ ಮೂಲಕ ಟೀಕೆಗೆ ಒಳಗಾಗಿತ್ತು. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 1 ಕೋಟಿ 5 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪಬ್ಲಿಕ್ ಪರೀಕ್ಷೆಗೆ ಪೂರಕವಾದ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳದೆ, ಪೂರ್ವ ತಯಾರಿ ಇಲ್ಲದೆ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಇಂತಹ ಪ್ರಯತ್ನಗಳನ್ನು ಮಾಡಿದರೆ ಅದರ ನಕಾರಾತ್ಮಕ ಪರಿಣಾಮ ವಿದ್ಯಾರ್ಥಿಗಳ ಮೇಲೆ ಉಂಟಾಗುತ್ತದೆ. ಈಗಿನ ವ್ಯವಸ್ಥೆಗೆ ಅನುಗುಣವಾಗಿ ಶಾಲಾ ಹಂತದಲ್ಲಿ ಕಲಿಕಾ ಪದ್ಧತಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಪಬ್ಲಿಕ್ ಪರೀಕ್ಷೆಯ ಅವಶ್ಯಕತೆ ಇರುವುದಿಲ್ಲ. ಇಲಾಖೆಯ ಕೆಲವು ಅಧಿಕಾರಿಗಳ ಪ್ರತಿಷ್ಠೆಗಾಗಿ ಪಬ್ಲಿಕ್ ಪರೀಕ್ಷೆಗಳನ್ನು ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗಾಗಲಿ ಅಥವಾ ಶೈಕ್ಷಣಿಕ ವ್ಯವಸ್ಥೆಗಾಗಲಿ ಯಾವುದೆ ಪ್ರಯೋಜನ ಇರುವುದಿಲ್ಲ ಎಂದು ಹೇಳಿದ್ದಾರೆ.
BIG BREAKING NEWS: `SC-ST’ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್
ಆದುದರಿಂದ ತಾವು ದಯಮಾಡಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ರಾಜ್ಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಾರಕವಾಗುವ ಮತ್ತು ಶೈಕ್ಷಣಿಕ ಗುಣಮಟ್ಟದ ಕುಸಿತಕ್ಕೆ ಕಾರಣವಾಗಬಹುದಾದ ಉದ್ದೇಶಿತ 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ಕೈಬಿಡಲು ಸೂಚಿಸಬೇಕಾಗಿ ಕೋರಿದ್ದಾರೆ.