ಬೆಂಗಳೂರು: ನಾಳೆ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ( BJP state executive committee meeting ) ಬೆಳಿಗ್ಗೆ 10.30 ಗಂಟೆಗೆ ಅರಮನೆ ಮೈದಾನದಲ್ಲಿ ( Palace Ground ) ನಡೆಯಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ( CT Ravi ) ಅವರು ತಿಳಿಸಿದರು.
ನಗರದ ತ್ರಿಪುರ ವಾಸಿನಿ, ಗೇಟ್ ನಂ.2 ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪ್ರಭಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ಎಲ್ಲ ಕೋರ್ ಕಮಿಟಿ ಸದಸ್ಯರು, ಸಹ ಪ್ರಭಾರಿ ಶ್ರೀಮತಿ ಡಿ.ಕೆ.ಅರುಣಾ, 592 ಜನ ರಾಜ್ಯ ಕಾರ್ಯಕಾರಿಣಿಯ ಅಪೇಕ್ಷಿತ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಹಾಲಿ ಸಂಸದರು, ಹಾಲಿ ಶಾಸಕರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ರಾಜ್ಯ ಅಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರು, ಜಿಲ್ಲೆ, ವಿಭಾಗಗಳ ಪ್ರಭಾರಿಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಈ ರಾಜ್ಯ ಕಾರ್ಯಕಾರಿಣಿಯ ಅಪೇಕ್ಷಿತ ಸದಸ್ಯರಾಗಿದ್ದಾರೆ ಎಂದು ವಿವರ ನೀಡಿದರು.