ಬೆಂಗಳೂರು: ಕನ್ನಡಿಗರ ಅಸ್ಮಿತೆಯ ಪ್ರತೀಕವಾದ ಕನ್ನಡ ಸಾಹಿತ್ಯ ಪರಿಷತ್ತಿನ ಪುರಾತನ ಕಟ್ಟಡಗಳು ಈಗ ಹೊಸ ರೂಪದೊಂದಿಗೆ ನವೀಕೃತಗೊಂಡಿವೆ. ಸುಸಜ್ಜಿತವಾಗಿ ರೂಪಗೊಂಡಿರುವ ಪರಿಷತ್ತಿನ ಕೃಷ್ಣರಾಜ ಪರಿಷತ್ತಿನ ಮಂದಿರ ಲೋಕಾರ್ಪಣೆಗೆ ಸಿದ್ಧವಾಗಿದೆ. ಆಗಸ್ಟ್ 26 ಶುಕ್ರವಾರ ಸಂಜೆ 5 ಗಂಟೆಗೆ ʻಕೃಷ್ಣರಾಜ ಪರಿಷತ್ತಿನ ಮಂದಿರʼ ಹಾಗೂ ʻಆವರಣದ ನವೀಕೃತ ಕಟ್ಟಡವನ್ನುʼ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ.
BREAKING NEWS: ರಾಜ್ಯ ಸರ್ಕಾರದಿಂದ ವಿವಿಧ ಟ್ರಸ್ಟ್, ಪ್ರತಿಷ್ಠಾನಗಳಿಗೆ ನೂತನ ಅಧ್ಯಕ್ಷರು, ಸದಸ್ಯರ ನೇಮಿಸಿ ಆದೇಶ
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಆದಾಗ ಅದರ ಕಚೇರಿ ಪ್ರಾರಂಭವಾದದ್ದು ಬೆಂಗಳೂರಿನ ಚಾಮರಾಜ ಪೇಟೆಯ ೪ನೆಯ ಮುಖ್ಯರಸ್ತೆಯ ಬಾಡಿಗೆ ಮನೆಯೊಂದರಲ್ಲಿ. ನಂತರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಪರಿಷತ್ತಿಗೆ ಸ್ವಂತ ನಿವೇಶನದ ಕನಸು ಕಂಡವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಕರ್ಪೂರ ಶ್ರೀನಿವಾಸರಾಯರು. ಅದಕ್ಕೆ ಇಂಬು ನೀಡಿದವರು ಅಂದಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್. ಇವರ ಪ್ರಯತ್ನದಿಂದ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದ ಈಗಿನ ನಿವೇಶನ ದೊರಕಿತು. ಇದು ಮೊದಲು ವಿಶಾಲವಾದ ಬಯಲು ಪ್ರದೇಶವಾಗಿತ್ತು. ಇಲ್ಲಿ ಭಾರತ ಸ್ವಾತಂತ್ರ್ಯ ಚಳುವಳಿಯ ಎಲ್ಲ ಸಭೆಗಳೂ ನಡೆಯುತ್ತಿದ್ದವು. ಹೀಗಾಗಿ ಜನರು ಇದನ್ನು `ಗಾಂಧಿ ಮೈದಾನ’ವೆಂದು ಕರೆಯುತ್ತಿದ್ದರು ಸರಕಾರದಿಂದ ಪ್ರಸ್ತುತ ಸ್ಥಳ ಪರಿಷತ್ತಿಗೆ ದಾನವಾಗಿ ದೊರೆಯಿತು.
ಕನ್ನಡ ಸಾಹಿತ್ಯ ಪರಿಷತ್ತು ಸ್ವಂತ ಸಂಪನ್ಮೂಲದ ಜೊತೆಗೆ ಖಾಸಗಿ ಸಂಸ್ಥೆಗಳ ಸಾರ್ವಜನಿಕ ಹಿತಾಸಕ್ತಿ ನಿಧಿ ಹಾಗೂ ಸರಕಾರದ ಅನುದಾನಗಳನ್ನು ಬಳಸಿಕೊಂಡು ಸರಿ ಸುಮಾರು 1.95 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ಹಾಗೂ ಆವರಣ ಸಂಪೂರ್ಣ ಆಧುನಿಕ ರೀತಿಯಲ್ಲಿ ನವೀಕರಣ ಮಾಡಲಾಗಿದೆ. ಅತೀ ಸುಸಜ್ಜಿತ ಸಭಾಭವನ ಹೊಂದಿರುವ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ 128 ಆಸನಗಳು, 10 ಗಣ್ಯರ (ವಿಐಪಿ) ಆಸನಗಳು ಸೇರಿದಂತೆ ಪ್ರತ್ಯೇಕ ಸೋಫಾಗಳನ್ನು ಹೊಂದಿರುವ ಸಭಾಭವನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬಾಡಿಗೆ ಆಧಾರದಲ್ಲಿ ನೀಡಲಾಗುವುದು. ನಿಯಮಾನುಸಾರ ಬಾಡಿಗೆ ನಿರ್ಧರಿಸಲು ಸಮಿತಿಯೊಂದನ್ನು ರಚಿಸಿ ಆ ಸಮಿತಿ ನಿಗದಿ ಮಾಡಿರುವ ಠೇವಣಿ ಹಾಗೂ ಬಾಡಿಗೆಯನ್ನು ವಿಧಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ.