ಬೆಂಗಳೂರು: ಆರ್.ಎಸ್.ಎಸ್ ನ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆಭಾಗಿದ್ದೇನೆ. ಅದರ ತತ್ವ ಆದರ್ಶಗಳ ಹಿನ್ನೆಲೆಯಲ್ಲಿ ದೇಶ ಕಟ್ಟಲು ಪಣವನ್ನು ತೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದುದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅಮೃತ ಭಾರತಿಗೆ ಕರುನಾಡ ಆರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಕನ್ನಡ ನಾಡಿನ ಜನತೆಗೆ 76 ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಆರ್.ಎಸ್ಎಸ್ ಬಗ್ಗೆ ನನಗೆ ಅಭಿಮಾನವಿದೆ. ದೇಶದ ಅಭಿವೃದ್ಧಿಯ ಎಲ್ಲ ವಿಚಾರಗಳನ್ನಿಟ್ಟುಕೊಂಡು ನಾವೆಲ್ಲರೂ ಮುಂದೆ ಹೋಗೋಣ ಎಂದರು.
ಅಮೃತಕಾಲ ನಮ್ಮದು. ಭವಿಷ್ಯ ಮತ್ತು ದೇಶ ನಮ್ಮದು. ಈ ದೇಶವನ್ನು ವಿಶ್ವದಲ್ಲಿಯೇ ಅಗ್ರಮಾನ್ಯ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಕರೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊಟ್ಟಿದ್ದಾರೆ. ಅವರ ವಿಚಾರಕ್ಕೆ ಸಂಪೂರ್ಣವಾಗಿ ಬೆಂಬಲವನ್ನು ಕೊಡೋಣ. ಅದಕ್ಕಾಗಿ ಶಕ್ತಿಯನ್ನು ತುಂಬುತ್ತ ನಾವು ಮುಂದೆ ನಡೆಯೋಣ. ಯಶಸ್ಸು, ಸಾಧನೆ ನಮ್ಮದಾಗುತ್ತದೆ. ದೇಶದ ಭವಿಷ್ಯ ನಿರ್ಮಿಸೋಣ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಒಂದು ದೇಶ 75 ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಮಯದಲ್ಲಿರುವ ನಾವೆಲ್ಲರೂ ಸುದೈವಿಗಳು. ಒಬ್ಬ ವ್ಯಕ್ತಿಗೆ 75 ದೊಡ್ಡದು, ಒಂದು ದೇಶಕ್ಕೆ ದೊಡ್ಡದಲ್ಲ. ಅನುಭವ, ಯುವಶಕ್ತಿಯಿರುವ ನಾಯಕ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ದೇಶ ಮುಂದುವರೆಯುತ್ತಿದೆ ಎಂದರು.
ಸ್ವತಂತ್ರ ಹೋರಾಟದ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಯಾರಿಂದಲೂ ಸ್ವತಂತ್ರ ಹೋರಾಟದ ಇತಿಹಾಸವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಸ್ವತಂತ್ರ ಹೋರಾಟದ ಇತಿಹಾಸ ಬರೆಯುವವರು ಬದಲಾವಣೆಯ ಪ್ರಯತ್ನವನ್ನು 75 ವರ್ಷದಿಂದ ಮಾಡಿದ್ದಾರೆ. ಸತ್ಯವನ್ನು ಪ್ರಕಟಿಸುವ, ಸತ್ಯವನ್ನು ಇವತ್ತಿನ ಜನಾಂಗ ಅರಿಯುವ ಕಾಲ ಬಂದಿದೆ. ಸ್ವಾತಂತ್ರ್ಯ ಸಾವಿರಾರು ಜನರ ತ್ಯಾಗ ಬಲಿದಾನದಿಂದ ಬಂದಿದೆ. ಯೋಧರು, ರೈತರು, ಕೂಲಿಕಾರರು, ಹಲವಾರು ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು ಹೆಸರುಗಳು ಎಲ್ಲಿಯೂ ಬರುವುದಿಲ್ಲ. ಕರ್ನಾಟಕದಲ್ಲಿಯೇ ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ 25 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಹೆಸರು ಪ್ರಕಟವಾಗಿಲ್ಲ. 1947 ಕ್ಕಿಂತ ಮೊದಲು 150 ವರ್ಷದ ಹಿಂದೆ ಸ್ವತಂತ್ರ ಹೋರಾಟ ಆರಂಭವಾಗಿದೆ. ಬ್ರಿಟಿಷರ ವಿರುದ್ಧ ದಂಗೆ ಎದ್ದವರು ರೈತರು. ಗುಜರಾತ್ ನ ಬಾರ್ಡೋಲಿ ಸತ್ಯಾಗ್ರಹ, ಪಶ್ಚಿಮ ಬಂಗಾಳದ ಇಂಡಿಗೋ ಸತ್ಯಾಗ್ರಹ, ದಕ್ಷಿಣದ ಭಾರತದ ಡೆಖ್ಖನ್ ಸತ್ಯಾಗ್ರಹದಿಂದ ಬ್ರಿಟಿಷರಿಗೆ ನಡುಕ ಹುಟ್ಟಿತ್ತು ಎಂದರು.
BIG BREAKING NEWS: ನಾಳೆ ‘ಶಿವಮೊಗ್ಗ-ಭದ್ರಾವತಿ ನಗರ’ದ ‘ಶಾಲಾ-ಕಾಲೇಜು’ಗಳಿಗೆ ರಜೆ ಘೋಷಣೆ
ಜಲಿಯನ್ ವಾಲಾಬಾಗ್ ನಲ್ಲಿ 4 ಸಾವಿರ ಜನರ ಸಾವನ್ನಪ್ಪಿದರು. ನಾರಾಯಣ ಡೋಣಿ ಹೆಸರು ನೀವು ಕೇಳಿಲ್ಲ. ಹುಬ್ಬಳ್ಳಿಯ 12 ವರ್ಷದ ಬಾಲಕ ವಂದೇ ಮಾತರಂ ಹೇಳಿರುವುದಕ್ಕೆ ಬ್ರಿಟಿಷರ ಗುಂಡಿಗೆ ಬಲಿಯಾದ. ಅಂಕೋಲಾದ ಉಪ್ಪಿನ ಸತ್ಯಾಗ್ರಹ, ಈಸೂರಿನ ಸತ್ಯಾಗ್ರಹದಲ್ಲಿ ಗೋಲಿಬಾರ ಮತ್ತು ಮರಣದಂಡನೆ ಆಯಿತು. ಅವರ ಹೆಸರು ಎಲ್ಲಿಯೂ ಬಂದಿಲ್ಲ. ಇತಿಹಾಸಕಾರರು ಅವರ ಹೆಸರುಗಳನ್ನು ಬರೆದಿಲ್ಲ. ಅಂತಹ ಅನಾಮಧೇಯ ತ್ಯಾಗ, ಪ್ರಾಣ ಕೊಟ್ಟ ನಮ್ಮ ಹೋರಾಟಗಾರರಿಗೆ ನಾವು ಈ 75 ನೇ ವರ್ಷದ ಮಹೋತ್ಸವವನ್ನು ಸಮರ್ಪಣೆ ಮಾಡಬೇಕಾಗಿದೆ ಎಂದರು.
ದೇಶ ಸ್ವತಂತ್ರ ಬಂದ ದಿನವೇ ವಿಭಜನೆ ಆಗಿದೆ. ಇದನ್ನು ತಡೆಯಬೇಕು ಎಂದು ವೀರ ಸಾವರ್ಕರ್ ಹಾಗೂ ಗಡಿನಾಡ ಗಾಂಧಿ ಅದ್ಬುಲ್ ಗಫರ್ ಖಾನ್ ಪ್ರಯತ್ನ ಮಾಡಿದರು. ಸಾವಿರಾರು ಜನರು ಆಹಾರವಿಲ್ಲದೇ ತುಳಿತಕ್ಕೊಳಗಾಗಿ ಪ್ರಾಣ ಕಳೆದುಕೊಂಡರು. ಇವತ್ತು ಭಾರತಕ್ಕೆ 10 ಲಕ್ಷ ಜನರು ನಿರಾಶ್ರಿತರಾಗಿ ಬಂದಿದ್ದಾರೆ. ಇದು ದುರಂತ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
BIG BREAKING NEWS: ಶಿವಮೊಗ್ಗದಲ್ಲಿ ಭುಗಿಲೆದ್ದ ಸಾವರ್ಕರ್ ಪೋಸ್ಟರ್ ಗಲಾಟೆ: ಇಬ್ಬರಿಗೆ ಚಾಕು ಇರಿತ
ಸ್ವಾತಂತ್ರ್ಯದ ಬಳಿಕ 33 ಕೋಟಿ ಜನಸಂಖ್ಯೆಯ ಜನರಿಗೆ ಆಹಾರ ಪೂರೈಕೆ ಮಾಡಲು ಸಾಧ್ಯ ಆಗಿರಲಿಲ್ಲ. ಇವತ್ತು 130 ಕೋಟಿ ಜನಸಂಖ್ಯೆಗೆ ಎಲ್ಲರಿಗೂ ಆಹಾರದ ಸುರಕ್ಷತೆ ಇದೆ. ಭೂಮಿಯನ್ನು ಉತ್ತಿ ಬಿತ್ತಿ ನಮ್ಮೆಲ್ಲರಿಗೂ ಆಹಾರವನ್ನು ನಮ್ಮ ಭಾರತ ದೇಶದ, ಕನ್ನಡ ನಾಡಿನ ರೈತ ಕೊಡುತ್ತಿದ್ದಾನೆ. ಭಾರತ ದೇಶವನ್ನು 75 ವರ್ಷ ಕಟ್ಟಿ ಸಲುಹಿದವನು ರೈತ. ಅವನಿಗೆ ನನ್ನ ಮೊದಲ ನಮನ. ಗಡಿಯಲ್ಲಿ ಹಲವಾರು ಯುದ್ಧಗಳು ಆಗಿವೆ. ಭಾರತ ಎಂದಿಗೂ ಬಗ್ಗಲಿಲ್ಲ, ಜಗ್ಗಲಿಲ್ಲ. ಚೀನಾ ಯುದ್ಧದ ವೇಳೆ ಅವತ್ತಿನ ನಾಯಕರು ದಿಟ್ಟತನ ತೋರಿಸಲಿಲ್ಲ. ನಮ್ಮ ಸೈನಿಕರಿಗೆ ಧೈರ್ಯ ತುಂಬಿ ಸಕಾಲಕ್ಕೆ ಆಜ್ಞೆಯನ್ನು ಕಳುಹಿಸಿದ್ದರೆ, ಚೀನಾ ಯುದ್ಧದಲ್ಲಿ ನಮಗೆ ಹಿನ್ಮೆಡೆಯಾಗುತ್ತಿರಲಿಲ್ಲ. ಉಳಿದ ಎಲ್ಲ ಯುದ್ಧಗಳಲ್ಲಿ ತಮ್ಮ ಪ್ರಾಣವನ್ನು ಕೊಟ್ಟು ದೇಶವನ್ನು ಕಾಯ್ದ ಯೋಧರಿಗೆ ನನ್ನ ಎರಡನೇಯ ನಮನ ಸಲ್ಲಿಸುತ್ತೇನೆ ಎಂದರು.
ಈ ದೇಶವನ್ನು ರೈತರು, ಯೋಧರು, ಶಿಕ್ಷಕರು, ವೈದ್ಯರು, ವಿಜ್ಞಾನಿಗಳು, ಇಂಜಿನಿಯರ್ಸ್, ಕೂಲಿಕಾರ್ಮಿಕರು ತಮ್ಮ ಹೊಟ್ಟೆಯನ್ನು ಅರ್ಧಕ್ಕೆ ಕಟ್ಟಿಕೊಂಡು ದೇಶ ಕಟ್ಟುವುದರಲ್ಲಿ ಅವರೆಲ್ಲರ ಪಾಲಿದೆ. ಅವರೆಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸಿ, ಅವರನ್ನು ನೆನೆಯುವ ದಿನ ಇವತ್ತು. ನಮ್ಮ ದೇಶ ಸಂಪತ್ಭರಿತವಾದ ದೇಶ. ಆದರೆ ಇವತ್ತು ನಮ್ಮ ದೇಶದ ಏಕತೆ, ಅಖಂಡತೆಯನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿದೆ. ಸ್ವತಂತ್ರ ಯಾರು ತಂದರು ಎಂದು ಪೈಪೋಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಿಜವಾದ ಸ್ವತಂತ್ರ ತಂದವರು ಅನಾಮಧೇಯ ಹೋರಾಟಗಾರರು. ಅವರಿಗೆ ನೇತೃತ್ವವನ್ನು ಕೊಟ್ಟವರು ಲೋಕಮಾನ್ಯ ತಿಲಕ್, ವೀರ ಸಾವರ್ಕರ್, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ ಸಿಂಗ್, ಚಂದ್ರಶೇಖರ ಆಜಾದ್, ಲಾಲಲಜಪತ್ ರಾಯ್, ತ್ಯಾತ್ಯಾ ಟೋಪಿ, ಅದರ ಪೂರ್ವದಲ್ಲಿ ನಮ್ಮ ಕನ್ನಡ ನಾಡಿನ ವೀರ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ಇವರೆಲ್ಲರ ನೇತೃತ್ವದಲ್ಲಿ ಸ್ವತಂತ್ರ ಬಂದಿದೆ.
ಸ್ವತಂತ್ರ ಬಂದ ನಂತರ ಭಾರತವನ್ನು ಒಂದು ಮಾಡಿದ್ದು ಉಕ್ಕಿನ ಮನುಷ್ಯ ವಲ್ಲಬಾಯಿ ಪಟೇಲ್. ಕರ್ನಾಟಕದಲ್ಲಿ ನೂರಾರು ಜನರ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ. ಅವರೆಲ್ಲರ ಹೆಸರು, ಫೋಟೋಗಳನ್ನು ನಾವು ಹಾಕಿ ಅವರು ಮಾಡಿರುವ ಕೆಲಸಗಳ ಬಗ್ಗೆ ಪ್ರಕಟಣೆ ಮಾಡಿದ್ದೇವೆ. ಹಿಂದೆ ಯಾರು ಮಾಡಿರಲಿಲ್ಲ. ಅದರ ಬಗ್ಗೆ ಯಾರು ಒಳ್ಳೆಯ ಮಾತು ಆಡುವುದಿಲ್ಲ. ಅವರ ನಾಯಕರ ಫೋಟೋ ಇಲ್ಲ ಎಂದು ಹೇಳಿ, ಅವರು ಬಹಳ ದುಃಖ ಪಡುತ್ತಿದ್ದಾರೆ. ನೆಹರು ಅವರ ಬಗ್ಗೆ ನಮಗೆ ಗೌರವ ಇದೆ. 65 ವರ್ಷ ಅವರ ಹೆಸರಿನಲ್ಲಿಯೇ ದೇಶ ನಡೆಸಿದ್ದಿರಿ. ನಾವು ಅವರನ್ನು ಮರೆತಿಲ್ಲ. ಅವರು ಮಾಡಿರುವ ಕೆಲಸಗಳನ್ನು ಮರೆತಿಲ್ಲ. ನೆಹರು ಅವರದ್ದು ಪ್ರಕಟಣೆ ಮಾಡಿದ್ದೇವೆ. ಅವರಿಗೆಲ್ಲರಿಗೂ ಗೌರವ ಕೊಟ್ಟಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು. ಸ್ವಾತಂತ್ರ್ಯದ ಮೊದಲ ಪ್ರಧಾನಮಂತ್ರಿಯಿಂದ ಇಲ್ಲಿಯವರೆಗೂ ಎಲ್ಲ ಪ್ರಧಾನಮಂತ್ರಿಗಳು ಮಾಡಿರುವ ಸಾಧನೆಯ ಮ್ಯೂಸಿಯಂ ಮಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ. ಶಾಶ್ವತವಾದ ಸ್ಮರಣೆಯನ್ನು ಮಾಡುವಂತೆ ಮಾಡಿರುವುದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ನೀವು 65 ವರ್ಷದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನು ಬಿಟ್ಟಿದ್ದಿರಿ. ಸಂವಿಧಾನ ರಚನೆ ಮಾಡದೇ ಇದ್ದಿದ್ದರೆ ಇವರು ಯಾರು ಪ್ರಧಾನಿ ಆಗುತ್ತಿರಲಿಲ್ಲ. ಜನಪ್ರತಿನಿಧಿ ಆಗುತ್ತಿರಲಿಲ್ಲ. ಅಂತಹ ಮಹಾನ್ ವ್ಯಕ್ತಿಗೆ ಪಾರ್ಲಿಮೆಂಟ್ ನಲ್ಲಿ ಜಾಗ ಕೊಡಲಿಲ್ಲ. ಅವರು ನಿಧನರಾದಾಗ ಅವರ ಅಂತ್ಯಕ್ರಿಯೆಗೆ ಜಾಗ ಕೊಡಲಿಲ್ಲ. ಅವರ ಸ್ಮಾರಕಗಳನ್ನು ಅಲ್ಲಲ್ಲಿ ಬಿಟ್ಟಿದ್ದಿರಿ. ಇವತ್ತು ಕರ್ನಾಟಕದಲ್ಲಿ ಹತ್ತು ಸ್ಥಳಗಳಲ್ಲಿ ಅಂಬೇಡ್ಕರ್ ಬಂದು ಹೋಗಿದ್ದಾರೆ. ಅವುಗಳ ಅಭಿವೃದ್ಧಿಗೆ ನಮ್ಮ ಬಜೆಟ್ ನಲ್ಲಿ ನಾನು 25 ಕೋಟಿ ರೂ ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
1947 ರಲ್ಲಿ ಹೇಗೆ ಸಂಭ್ರಮ ಹೇಗಿತ್ತೋ ಹಾಗೆ ಇವತ್ತು ಜನರು ಸಂಭ್ರಮ ಮಾಡುತ್ತಿದ್ದಾರೆ. ಸ್ವಾರ್ಥದ ರಾಜಕೀಯವನ್ನು ದೇಶ ಕಂಡಿದೆ. ಇವತ್ತು ಮಾತಿಗಿಂತ ನಮ್ಮ ಕೆಲಸಗಳು ಮಾತನಾಡಬೇಕು. ಆ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಕೆಲಸ ಕಾರ್ಯ ಮಾಡುತ್ತಿದೆ. ಇಂತಹ ದೇಶಭಕ್ತಿಯ ಪಕ್ಷದ ಮೇಲೆ ದೇಶ ಕಾಯುವ, ಕಟ್ಟುವ ಗುರತರವಾದ ಜವಾಬ್ದಾರಿ ಇದೆ. ಸ್ವತಂತ್ರ ಹೋರಾಟದ ಲಾಭ ತೆಗೆದುಕೊಂಡವರು ಬೇರೆ ಇದ್ದಾರೆ. ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ, ಲಾಲ ಬಹಾದ್ದೂರ ಶಾಸ್ತ್ರಿ, ಬಾಬಾ ಸಾಹೇಬ ಅಂಬೇಡ್ಕರ್, ಅವರ ಮಕ್ಕಳು, ಮೊಮ್ಮಕ್ಕಳು ಎಲ್ಲಿದ್ದಾರೆ, ಯಾವ ಹುದ್ದೆಯಲ್ಲಿ ಇದ್ದಾರೆ ಎಂದು ನಾನು ಪ್ರಶ್ನೆ ಮಾಡುತ್ತೇನೆ. ಸ್ವತಂತ್ರ ಹೋರಾಟದ ಲಾಭ ಪಡೆದುಕೊಂಡವರು ಇವತ್ತು ಉತ್ತರ ಕೊಡಬೇಕು ಎಂದರು.
ಭಾರತೀಯತೆ ನಮ್ಮ ಧರ್ಮ, ಭಾರತ ಸಂವಿಧಾನ ನಮ್ಮ ಧರ್ಮಗ್ರಂಥ ಎಂದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅದನ್ನು ಇವತ್ತು ಪಾಲಿಸೋಣ. ಮುಂದಿನ 25 ಭವ್ಯ ಭಾರತ ಕಟ್ಟಲು ಕೈ ಜೋಡಿಸೋಣ ಎಂದು ಸಿಎಂ ಬಸವರಾಜ ಬೊಮಾಯಿ ಹೇಳಿದರು.