ಶಿವಮೊಗ್ಗ : ಅಲ್ಪಸಂಖ್ಯಾತರಿಗೆ ಲಭ್ಯವಿರುವ ವಿದ್ಯಾರ್ಥಿವೇತನಗಳು, ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ದಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಹೆಚ್ಚಿನ ಪ್ರಚಾರ ನೀಡಿ, ಫಲಾನುಭವಿಗಳು ಇವುಗಳ ಉಪಯೋಗ ಪಡೆಯುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆಗಳು ಸಮನ್ವಯ ಸಾಧಿಸಿ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ರೀತಿಯ ವಿದ್ಯಾರ್ಥಿವೇತನಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಆ ಮೂಲಕ ಹೆಚ್ಚಿನ ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯುವಂತೆ ಆಗಬೇಕು ಎಂದರು.
ಕೌಶಲ್ಯಾಭಿವೃದ್ದಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಇತರೆ ಇಲಾಖೆಗಳು ಇವರಿಗೆ ಲಭ್ಯವಿರುವ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ತರಬೇತಿಗಳು, ಸ್ವಂತ ಉದ್ಯೋಗ ಕೈಗೊಳ್ಳಲು ಅಗತ್ಯವಾದ ಸಾಲ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಸಮಿತಿಯ ನಾಮನಿರ್ದೇಶಿತ ಸದಸ್ಯರು ಸಹ ಈ ಬಗ್ಗೆ ತಮ್ಮ ಸಮುದಾಯದಲ್ಲಿ ತಿಳಿಸಬೇಕು ಎಂದರು. ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ನಿಯಮಿತವಾಗಿ ಮೌಲ್ವಿಗಳೊಂದಿಗೆ ಸಭೆ ನಡೆಸುತ್ತಿದ್ದು, ಮೌಲ್ವಿಯವರ ಮೂಲಕ ಸಹ ಸಮುದಾಯಕ್ಕೆ ಈ ವಿಚಾರಗಳ ಬಗ್ಗೆ ತಿಳಿಸುವಂತೆ ಅವರು ಕೋರಿದರು.
ಶಾಲೆ ಬಿಟ್ಟ ಅಲ್ಪಸಂಖ್ಯಾತ ಮಕ್ಕಳನ್ನು ಅಧಿಕಾರಿಗಳು, ನಾಮನಿರ್ದೇಶಿತ ಸದಸ್ಯರು ಗುರುತಿಸಿ ಶಾಲೆಗೆ ತರುವ ಕೆಲಸ ಮಾಡಬೇಕು. ಈ ಕುರಿತು ಯೋಜನೆ ರೂಪಿಸಿ ಮಕ್ಕಳು ನಿಯಮಿತವಾಗಿ ಶಾಲೆಗೆ ಬರುವ ಹಾಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಮಗ್ರ ಶಿಶು ಅಭಿವೃದ್ದಿ ಕಾರ್ಯಕ್ರಮದಡಿ ಅಂಗನವಾಡಿ ಮಕ್ಕಳಿಗೆ ಸಮರ್ಪಕವಾಗಿ ಆಹಾರ ವಿತರಣೆಯಾಗದಿರುವ ಬಗ್ಗೆ ನಾಮನಿರ್ದೇಶಿತ ಸದಸ್ಯ ಮನ್ಸೂರ್ ಮಿರಾನ್ ಸಭೆ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳು, ಜಿ.ಪಂ ಯ ಉಪ ಕಾರ್ಯದರ್ಶಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಗ್ರಾಮೀಣ ವಸತಿ ಯೋಜನೆಯಾದ ಇಂದಿರಾ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ, ಬಸವ ವಸತಿ ಯೋಜನೆಗಳಡಿ ನಿಗದಿತ ಗುರಿ ಸಾಧನೆ ಇನ್ನೂ ಬಾಕಿ ಇದೆ. ಇದನ್ನು ಶೀಘ್ರದಲ್ಲೇ ಸಾಧಿಸಲು ಕ್ರಮ ವಹಿಸಬೇಕು ಎಂದ ಅವರು ಜಿಲ್ಲಾ ಕೈಗಾರಿಕಾ ಕೇಂದ್ರದ ಪಿಎಂ ಉದ್ಯೋಗ ಸೃಜನೆಯಲ್ಲಿ ಉತ್ತಮ ಪ್ರಗತಿಯಾಗಿದೆ ಎಂದರು.
ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಡಿ ಫಲಾನುಭವಿ ಆಯ್ಕೆ ವಿಳಂಬವಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಜಿ.ಪಂ ಉಪಕಾರ್ಯದರ್ಶಿಗಳು ಫಲಾನುಭವಿ ವಿವರವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ತಿಳಿಸಿದರು.
BIG NEWS: ‘ಸಿದ್ದರಾಮಯ್ಯ’ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ – ಡಿಕೆ ಶಿವಕುಮಾರ್ ಘೋಷಣೆ
ಆದ್ಯತೆ ವಲಯ ಸಾಲ ನೀಡುವಲ್ಲಿ ನಿಗದಿತ ಗುರಿ ಸಾಧನೆಯಾಗಬೇಕು. ಇದುವರೆಗೆ ಶೇ.40 ರಷ್ಟು ಮಾತ್ರ ಸಾಧನೆ ಆಗಿದ್ದು, ಇನ್ನು ಬಾಕಿ ಇರುವುದನ್ನು ಶೀಘ್ರವಾಗಿ ಸಾಧಿಸಲು ಕ್ರಮ ವಹಿಸುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ರವರಿಗೆ ಸೂಚಿಸಿದರು.
ವಿದ್ಯಾರ್ಥಿಗಳಿಲ್ಲದೇ ಖಾಲಿ ಇರುವ ನಗರದ ಅಲ್ಪಸಂಖ್ಯಾತ ಹಾಸ್ಟೆಲ್ನ್ನು ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಸಣ್ಣ ಪುಟ್ಟ ರಿಪೇರಿ ಮಾಡಿಸಿ ಇನ್ನು 15 ದಿನಗಳ ಒಳಗೆ ಸಿದ್ದಪಡಿಸಬೇಕು. ಇಲ್ಲವಾದಲ್ಲಿ ಸದರಿ ಹಾಸ್ಟೆಲ್ನ್ನು ಇತರೆ ಅವಶ್ಯಕತೆ ಇರುವ ಇಲಾಖೆಗೆ ನೀಡಲಾಗುವುದು ಎಂದು ತಿಳಿಸಿದರು.
ಕೃಷಿ, ಮೀನುಗಾರಿಕೆ, ಪಶುಪಾಲನೆ, ಖಾದಿ ಗ್ರಾಮೋದ್ಯೋಗ ಇತರೆ ಇಲಾಖೆಗಳಡಿ ಅಲ್ಪಸಂಖ್ಯಾತರ ಯೋಜನೆಗಳಡಿ ಇರುವ ಸೌಲಭ್ಯಗಳಸನ್ನು ಫಲಾನುಭವಿಗಳಿಗೆ ನೀಡುವ ಮೂಲಕ ನಿಗದಿತ ಅವಧಿಯಲ್ಲಿ ಗುರಿ ಸಾಧಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಸಮಿತಿ ನಾಮನಿರ್ದೇಶಿತ ಸದಸ್ಯರಾದ ಮನ್ಸೂರ್ ಮಿರಾನ್, ಅಮ್ಜದ್ ಖಾನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.