ಬೆಂಗಳೂರು : ನಾಗರೀಕರು ಚುನಾವಣಾ ಪ್ರಕ್ರಿಯೆಯಲ್ಲಿ ಸುಲಭವಾಗಿ ಭಾಗವಹಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗವು ಜಾರಿಗೆ ತಂದಿರುವ ಚುನಾವಣಾ ಸುಧಾರಣೆಗಳನ್ನು ಇಂದು ದೇಶದಾದ್ಯಂತ ಚಾಲನೆ ನೀಡಲಾಗಿದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ತಿಳಿಸಿದರು.
ಇಂದು ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಸುಧಾರಣೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯ ಕಾರ್ಯದರ್ಶಿಗಳು, ಚುನಾವಣಾ ಸುಧಾರಣೆಗಳ ಕುರಿತು ರಾಜ್ಯದ ಜನತೆಗೆ ಅರಿವು ಮೂಡಿಸಬೇಕು. ಚುನಾವಣಾ ಸುಧಾರಣೆಗಳನ್ನು ಕಾರ್ಯಗತಗೊಳಿಸಿದರೆ ನಮ್ಮ ರಾಜ್ಯಕ್ಕೆ ಒಳ್ಳೆಯ ಹೆಸರು ಬರುತ್ತದೆ. ಆದ್ದರಿಂದ ಮೊದಲು ಸರ್ಕಾರಿ ನೌಕರರಾದ ನಾವು ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಸಬೇಕು ನಂತರ ಜನತೆಗೆ ಪ್ರಚಾರ ಮಾಡಬೇಕು. ಆಧಾರ್ ಜೋಡಣೆಯಾದರೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ. ಮತದಾನ ನಮ್ಮ ಕರ್ತವ್ಯವಾಗಿದ್ದು, ಮತದಾನ ಮಾಡಲು ಪ್ರೇರಣೆ ಮಾಡಬೇಕು ಎಂದರು.
ಭೋವಿ ಕುಲಕಸುಬಿಗೆ ವಿಶೇಷ ಅವಕಾಶ ಹಾಗೂ ರಿಯಾಯ್ತಿ ತರಲು ವ್ಯವಸ್ಥೆ – ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮಾತನಾಡಿ, ಚುನಾವಣಾ ಸುಧಾರಣೆಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಯುವ ಸಮುದಾಯಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಮೊದಲಿನಂತೆ ಜನವರಿ 1ರ ವರೆಗೂ ಹಾಗೂ 18 ವರ್ಷ ತುಂಬಿದ ನಂತರ ಸೇರ್ಪಡೆ ಮಾಡಲು ಕಾಯುವಂತಿಲ್ಲ. 17 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಆಗಸ್ಟ್ 1, 2022 ರಿಂದ ಮತದಾರರ ನೋಂದಣಿಗಾಗಿ ಹೊಸ ಸರಳೀಕರಿಸಿದ ಅರ್ಜಿ ನಮೂನೆಗಳು ಲಭ್ಯವಿದ್ದು, ಮತದಾರರ ಪಟ್ಟಿಯ ಹೆಸರು, ಇನ್ನಿತರ ತಿದ್ದುಪಡಿಗಳಿಗಾಗಿ ಹೊಸ ನಮೂನೆ 8 ಲಭ್ಯವಿದೆ. ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತ ಆಧಾರ್ ಜೋಡಣೆ ಸೌಲಭ್ಯ ಕಲ್ಪಿಸಲಾಗಿದೆ. ಒಂದೇ ತರಹದ ಹೆಸರು-ಫೋಟೋ ನಮೂದುಗಳನ್ನು ಹೊಂದಿರುವ ಮತದಾರರ ಪರಿಶೀಲನೆಗೆ ಆದ್ಯತೆ ನೀಡಲಾಗಿದೆ. ಮತದಾರರ ಪಟ್ಟಿಯನ್ನು ಖಾತರಿಪಡಿಸುವ ಉದ್ದೇಶದಿಂದ ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆಯನ್ನು ಆಗಸ್ಟ್ ಮಾಹೆಯಿಂದ ಪ್ರಾರಂಭಿಸಲಾಗುವುದು ಎಂದರು.
ಪ್ರಸ್ತುತ ಜಾರಿಯಲ್ಲಿರುವ ಜನವರಿ 01ರ ಅರ್ಹತಾ ದಿನಾಂಕದ ಜೊತೆಗೆ 01ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್ ರಂದು ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮುಂದೆ ಮತದಾರರ ಪಟ್ಟಿಯನ್ನು ಪ್ರತಿ ತ್ರೈಮಾಸಿಕದಲ್ಲಿ ಕಾರ್ಯಗತಗೊಳಿಸಲಾಗುವುದು. ಇದರಿಂದ ಆ ತ್ರೈಮಾಸಿಕದಲ್ಲಿ 18 ವರ್ಷ ತುಂಬುವ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಜೊತೆಗೆ ಮತದಾರರ ಭಾವಚಿತ್ರದ ಗುರುತಿನ ಚೀಟಿಯನ್ನು ಸಹ ವಿತರಿಸಲಾಗುವುದು. ಪ್ರಸಕ್ತ 2023ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ 1ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್ 2022 ಕ್ಕೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರಿಂದ 18 ವರ್ಷಗಳನ್ನು ಪೂರೈಸಿದ ಯುವಕರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆವರೆಗೆ ಕಾಯುವುದನ್ನು ತಪ್ಪಿಸಲಾಗಿದೆ ಮತ್ತು ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ ಎಂದರು.
ಈ ಮೊದಲು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ವರ್ಗಾವಣೆಗಾಗಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದನ್ನು ಪರಿಷ್ಕರಿಸಿ ನಮೂನೆ-6 ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಮತ್ತು ಹೆಸರು ತೆಗೆದು ಹಾಕಲು ಚಾಲ್ತಿಯಲ್ಲಿರುವ ನಮೂನೆ-7ನ್ನು ಪರಿಷ್ಕರಿಸಲಾಗಿದೆ. ಇದರಿಂದ ಮರಣ, 18 ವರ್ಷ ಆಗದಿರುವುದು, ಈಗಾಗಲೇ ಬೇರೆ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ, ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತ್ತು ಭಾರತದ ಪ್ರಜೆಯಲ್ಲದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೆ ತೆಗೆಯಲು ನಮೂನೆ-7 ರಲ್ಲಿ ಅವಕಾಶ ಕಲ್ಪಿಸಿ ಪರಿಷ್ಕರಿಸಲಾಗಿದೆ. ಇದರ ಜೊತೆಗೆ ಮರಣ ಪ್ರಮಾಣಪತ್ರ ಲಗತ್ತಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಮೊದಲು ನಮೂನೆ-8 ರಲ್ಲಿ ಮತದಾರರ ಪಟ್ಟಿಯಲ್ಲಿನ ಮತದಾರರ ಹೆಸರು, ವಿಳಾಸ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲು ಅವಕಾಶವಿತ್ತು. ಪ್ರಸ್ತುತ ಪರಿಷ್ಕøತ ನಮೂನೆ 8ರನ್ವಯ ಮತದಾರರ ಹೆಸರು, ವಿಳಾಸ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಜೊತೆಗೆ ಒಂದು ವಿಧಾನಸಭಾ ಕ್ಷೇತ್ರದಿಂದ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ, ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವರ್ಗಾವಣೆ, ಬದಲಿ ಎಪಿಕ್ಗಾಗಿ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರ ತಮ್ಮ ಅಂಗವೈಕಲ್ಯ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
BIG NEWS: ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಗೆ ಚಕ್ರವರ್ತಿ ಸೂಲಿಬೆಲೆ ಅಪಮಾನ: ರೊಚ್ಚಿಗೆದ್ದ ಅಪ್ಪು ಫ್ಯಾನ್ಸ್
ಈ ಮೊದಲು ಒಂದು ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತರಕ್ಕಾಗಿ ಚಾಲ್ತಿಯಲ್ಲಿದ್ದ ಅರ್ಜಿ ನಮೂನೆ-8 ಎ ಯನ್ನು ರದ್ದುಪಡಿಸಲಾಗಿದೆ. ನಮೂನೆ -8ಎ ರಲ್ಲಿದ್ದ ಸೌಲಭ್ಯವನ್ನು ಪರಿಷ್ಕರಿಸಿದ ನಮೂನೆ-8 ರಲ್ಲಿ ಒದಗಿಸಲಾಗಿದೆ. ಈ ಮೊದಲು ಬದಲಿ ಎಪಿಕ್ಗಾಗಿ ನಮೂನೆ-001ರಲ್ಲಿ ಅರ್ಜಿ ಸಲ್ಲಿಸಲು ಇದ್ದ ಅವಕಾಶವನ್ನು ರದ್ದುಪಡಿಸಿ, ಸದರಿ ಅವಕಾಶವನ್ನು ಪರಿಷ್ಕರಿಸಿದ ನಮೂನೆ-8 ರಲ್ಲಿ ಒದಗಿಸಲಾಗಿದೆ.
ಮತದಾರರ ಪಟ್ಟಿಯಲ್ಲಿನ ಮತದಾರರನ್ನು ದೃಢೀಕರಣದ ಉದ್ದೇಶದಿಂದ ಹೊಸದಾಗಿ ನಮೂನೆ-6 ಬಿ ಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ದೃಢೀಕರಿಸಲು ಅವಕಾಶ ನೀಡಲಾಗಿದೆ. ಇದು ಮತದಾರರಿಗೆ ಸ್ವಯಂಪ್ರೇರಿತ ಅವಕಾಶವಿದ್ದು, ಅಕಸ್ಮಾತ್ ಆಧಾರ್ ಮಾಹಿತಿ ಒದಗಿಸಲು ಸಾಧ್ಯವಾಗದಿದ್ದಲ್ಲಿ ಮುಂದೆ ಸೂಚಿಸಿರುವ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಒದಗಿಸಿ ಆಗಸ್ಟ್ 01,2022 ರಿಂದ ಮಾರ್ಚ್ 31, 2023 ರೊಳಗೆ ದೃಢೀಕರಿಸಲು ಅವಕಾಶ ಕಲ್ಪಿಸಲಾಗಿದೆ.
ನರೇಗಾ ಉದ್ಯೋಗ ಕಾರ್ಡು. ಬ್ಯಾಂಕ್-ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್ ಪುಸ್ತಕಗಳು. ಕಾರ್ಮಿಕ ಮಂತ್ರಾಲಯದ ಯೋಜನೆಯಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡು. ಡ್ರೈವಿಂಗ್ ಲೈಸೆನ್ಸ್. ಪಾನ್ಕಾರ್ಡ್. ಎನ್ಪಿಆರ್ ಅಡಿಯಲ್ಲಿ ಆರ್ಜಿಐ ಮೂಲಕ ನೀಡಲಾದ ಸ್ಮಾರ್ಟ್ಕಾರ್ಡ್. ಇಂಡಿಯನ್ ಪಾಸ್ ಪೋರ್ಟ್. ಭಾವಚಿತ್ರವಿರುವ ಪಿಂಚಣಿ ದಾಖಲೆ. ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆಗಳು, ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ. ಸಂಸತ್ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯತುಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಇವುಗಳಲ್ಲಿ ಯಾವುದಾದರು ಒಂದು ದಾಖಲೆ ಸಲ್ಲಿಸಬೇಕು.
ನಮೂನೆ-6 ಬಿಯಲ್ಲಿ ಮಾಹಿತಿ ದೃಢೀಕರಿಸಲು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಅವಕಾಶವಿದೆ. ಆನ್ಲೈನ್ ವ್ಯವಸ್ಥೆಯಡಿ ಎನ್ವಿಎಸ್ಪಿ ಮತ್ತು ವೋಟರ್ ಹೆಲ್ಪ್ಲೈನ್ ಆಪ್ನಲ್ಲಿ ಮತದಾರರು ಮಾಹಿತಿಯನ್ನು ದೃಢೀಕರಿಸಲು ಅವಕಾಶವಿದೆ. ಆಧಾರ್ ಸ್ವಯಂ ದೃಢೀಕರಣಕ್ಕೆ ಆಧಾರ್ ಜೋಡಣೆಯಾಗಿರುವ ಮೊಬೈಲ್ಗೆ ಸ್ವೀಕೃತವಾಗುವ ಒಟಿಪಿ ಸೌಲಭ್ಯವನ್ನು ಒದಗಿಸಿದೆ. ಅಕಸ್ಮಾತ್ ಒಟಿಪಿ ಸಹಿತ ದೃಢೀಕರಣ ಸಾಧ್ಯವಾಗದಿದ್ದಲ್ಲಿ ಮತದಾರರು ಆಧಾರ್ನ್ನು ಮೇಲಿನ ಆಪ್ಗಳಲ್ಲಿ ಅಪ್ಲೋಡಿ ಮಾಡಿ ಅರ್ಜಿ ಸಲ್ಲಿಸಬಹದಾಗಿದೆ ಎಂದರು.
ಅಕಸ್ಮಾತ್ ಅಪ್ಲೋಡ್ ಮಾಡುವುದು ಸಾಧ್ಯವಾಗದಿದ್ದಲ್ಲಿ ಸಂಬಂಧಪಟ್ಟ ಬೂತ್ ಲೆವೆಲ್ ಅಧಿಕಾರಿಗೆ ನಮೂನೆ-6 ಬಿ ಯಲ್ಲಿ ಹಾರ್ಡ್ ಪ್ರತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ಅರ್ಜಿಯನ್ನು ಮತದಾರರ ಅನುಕೂಲ ಕೇಂದ್ರಗಳು, ಇ-ಸೇವಾ ಕೇಂದ್ರಗಳು ಮತ್ತು ನಾಗರೀಕ ಸೇವಾ ಕೇಂದ್ರಗಳು ಹಾಗೂ ಮತದಾರರ ನೋಂದಣಿ ಅಧಿಕಾರಿ/ಸಹಾಯಕ ಮತದಾರರ ನೋಂದಣಿ ಅಧಿಕಾರಿ ಕಚೇರಿಯಲ್ಲೂ ಸಲ್ಲಿಸಬಹುದಾಗಿದೆ ಎಂದರು.
ಮತದಾರರ ಪಟ್ಟಿ ವಾರ್ಷಿಕ ಸಂಕ್ಷಿಪ್ತ ಪರಿಷ್ಕರಣೆ : ಭಾರತ ಚುನಾವಣಾ ಆಯೋಗವು ಜನವರಿ 01, 2023 ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕೈಗೊಳ್ಳಲು ಆದೇಶಿಸಿದೆ. ಈ ಪ್ರಕ್ರಿಯೆಯಡಿ ಆಗಸ್ಟ್ 04, 2022 ರಿಂದ ಅಕ್ಟೋಬರ್ 24, 2022ರ ಅವಧಿಯಲ್ಲಿ ಪೂರ್ವ ಪರಿಷ್ಕರಣಾ ಚಟುವಟಿಕೆಗಳನ್ನು ಮಾಡಲಾಗುವುದು.
ಒಂದು ಮತಗಟ್ಟಯಲ್ಲಿ 1,500 ಕ್ಕಿಂತ ಹೆಚ್ಚು ಮತದಾರರಿದ್ದಲ್ಲಿ ವಿಭಜಿಸಿ ಹೊಸ ಮತಗಟ್ಟೆ ಸ್ಥಾಪನೆ, ಒಂದು ಮತಗಟ್ಟೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿನ ಸೆಕ್ಷನ್ಗಳನ್ನು ಬದಲಾವಣೆ ಅವಶ್ಯವಿದ್ದಲ್ಲಿ ವಿಭಾಗಗಳನ್ನು ಸರಿಪಡಿಸುವುದು. ಇದರಲ್ಲಿ ಒಂದು ಕುಟುಂಬದ ಎಲ್ಲಾ ಸದಸ್ಯರು ಮತ್ತು ನೆರೆಹೊರೆಯವರು ಒಂದೇ ವಿಭಾಗದಲ್ಲಿರುವಂತೆ ಖಾತರಿಪಡಿಸುವುದು. ಇದರ ಜೊತೆಗೆ ಮತದಾರರ ಪಟ್ಟಿಯಲ್ಲಿ ಒಬ್ಬರೇ ಮತದಾರರು ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೆ ತೆಗೆಯುವುದು. ಮತದಾರರ ಭಾವಚಿತ್ರ ಅಸ್ಪಷ್ಟವಾಗಿದ್ದಲ್ಲಿ ಸ್ಪಷ್ಟ ಭಾವಚಿತ್ರಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿ ಕಾಲೋಚಿತಗೊಳಿಸುವ ಮೂಲಕ ಮತದಾರರ ಪಟ್ಟಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು.
ನಂತರ ನವೆಂಬರ್ 09, 2022 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ನಂತರ ನವೆಂಬರ್ 9,2022 ರಿಂದ ಡಿಸೆಂಬರ್ 08, 2022ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕ್ಲೇಮ್ ಮತ್ತು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ತಕರಾರರು ಸಲ್ಲಿಸಲು ಅವಕಾಶವಿದೆ.
ಈ ಅವಧಿಯಲ್ಲಿ ಮತದಾರರ ನೋಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ಕ್ಲೇಮ್ ಮತ್ತು ತಕರಾರು ಸಲ್ಲಿಸಲು ಅನುವಾಗುವಂತೆ ವಿಶೇಷ ಕ್ಯಾಂಪ್ಗಳನ್ನು ಆಯೋಜಿಸಲಾಗುವುದು. ಸ್ವೀಕೃತಗೊಂಡ ಕ್ಲೇಮ್ ಮತ್ತು ತಕರಾರುಗಳನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಡಿಸೆಂಬರ್ 26, 2022ರ ಒಳಗಾಗಿ ಇತ್ಯರ್ಥಪಡಿಸುವುದು. ಮೇಲಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜನವರಿ 05, 2023 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಮತದಾರರ ಪಟ್ಟಿಯ ಗುಣಮಟ್ಟವನ್ನು ಜಿಲ್ಲಾ ಚುನಾವಣಾಧಿಕಾರಿ, ಆಯೋಗ ನೇಮಿಸುವ ರೋಲ್ ಅಬ್ಸರ್ವರ್ಸ್ ಹಾಗೂ ಮುಖ್ಯ ಚುನಾವಣಾಧಿಕಾರಿರವರು ಮೆಲುಸ್ತುವಾರಿ ಮತ್ತು ಪರಿಶೀಲನೆ ಕಾರ್ಯ ಕೈಗೊಳ್ಳುವರು.
ಈಗಾಗಲೇ ರಾಜಕೀಯ ಪಕ್ಷಗಳು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು, ಬೂತ್ ಲೆವೆಲ್ ಏಜೆಂಟ್ಗಳನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ಬೂತ್ ಲೆವೆಲ್ ಏಜೆಂಟ್ಗಳು ದಿನಕ್ಕೆ ಸಂಬಂಧಪಟ್ಟ ಬೂತ್ ಲೆವೆಲ್ ಅಧಿಕಾರಿಗೆ 10 ನಮೂನೆಗಳನ್ನು ಸಲ್ಲಿಸಲು ಅವಕಾಶವಿದೆ. ಕ್ಲೇಮು ಮತ್ತು ತಕರಾರುಗಳನ್ನು ಸಲ್ಲಿಸುವ ಅವಧಿಯಲ್ಲಿ ಒಬ್ಬ ಬೂತ್ ಲೆವೆಲ್ ಏಜೆಂಟ್ 30 ಕ್ಕಿಂತ ಹೆಚ್ಚು ನಮೂನೆಗಳನ್ನು ಸಲ್ಲಿಸಿದ್ದಲ್ಲಿ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ-ಸಹಾಯಕ ಮತದಾರರ ನೋಂದಣಾಧಿಕಾರಿ ಸ್ವತ: ಅಡ್ಡ ಪರಿಶೀಲನೆ ಮಾಡುವುದು. ಇದರ ಜೊತೆಗೆ ಬೂತ್ ಲೆವೆಲ್ ಏಜೆಂಟ್ ರವರು ನಮೂನೆಗಳ ಅರ್ಜಿ ಸಹಿತ ತಾನು ನೀಡಿರುವ ಅರ್ಜಿಗಳನ್ನು ಸ್ವತ: ಪರಿಶೀಲನೆ ಮಾಡಿರುವುದಾಗಿ ದೃಢೀಕರಣ ಸಲ್ಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್ ಅವರು ಚುನಾವಣಾ ಸಂದೇಶ ಬಿಡುಗಡೆ ಮಾಡಿದರು. ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಚುನಾವಣಾ ಸುಧಾರಣೆಗಳು ಕುರಿತ ಸಂದೇಶವನ್ನು ಹಾಗೂ ಜಂಟಿ ಮುಖ್ಯ ಚುನಾವಣಾಧಿಕಾರಿಗಳಾದ ಶಂಭು ಭಟ್ ಅವರು ವೋಟರ್ ಹೆಲ್ಪ್ಲೈನ್ ಆ್ಯಪ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿಯ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.