ಮೈಸೂರು: ಇಂದು ಜನಮನ ಪ್ರತಿಷ್ಠಾನದವರು ಮೈಸೂರಿನಲ್ಲಿ ಆಯೋಜಿಸಿದ್ದಂತ, ಸಿದ್ದರಾಮಯ್ಯ ಆಡಳಿತ: ನೀತಿ ನಿರ್ಧಾರʼ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಏನ್ ಮಾತನಾಡಿದ್ರು ಅಂತ ಮುಂದೆ ಓದಿ..
ನಮ್ಮ ಸರ್ಕಾರದ ಆಡಳಿತದ ನೀತಿ, ನಿರ್ಧಾರಗಳ ಬಗ್ಗೆ ವಿಶ್ಷೇಷಣೆ ಮಾಡಿ ಹಲವಾರು ಜನ ಚಿಂತಕರು ಲೇಖನದ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಯಾವ ಲೇಖಕರನ್ನು ನಾನು ಭೇಟಿ ಮಾಡಿಲ್ಲ, ನಮ್ಮ ಪಕ್ಷದ ಸಿದ್ಧಾಂತಗಳು, ಆಡಳಿತ ವೈಖರಿ ಬಗ್ಗೆ ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನೇಕ ದೇಶಗಳ ಸಂವಿಧಾನವನ್ನು ಓದಿ, ತಿಳಿದುಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಅಗತ್ಯವಿರುವ ಸಂವಿಧಾನವನ್ನು ರಚನೆ ಮಾಡಿಕೊಟ್ಟಿದ್ದಾರೆ. ಬೇರೆಲ್ಲ ದೇಶಗಳಿಗಿಂತ ಭಾರತ ಭಿನ್ನ ದೇಶ. ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನ ರಚನಾ ಸಭೆಯು ಈ ದೇಶಕ್ಕೆ ಅಗತ್ಯವಿರುವ ರಾಷ್ಟ್ರಧ್ವಜ, ಸಂಸದೀಯ ವ್ಯವಸ್ಥೆ ಇವುಗಳನ್ನು ಚರ್ಚೆ ಮಾಡಿ ನಿರ್ಧಾರ ಕೈಗೊಂಡರು. ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ರಚನಾ ಸಮಿತಿಯ ಎಲ್ಲಾ ಸದಸ್ಯರು ಸಂವಿಧಾನ ರಚನೆಗೆ ಕೊಡುಗೆ ನೀಡಿದ್ದಾರೆಂದು ಹೇಳಲು ಆಗಲ್ಲ, ಕೆಲವರು ಕೊಡುಗೆ ನೀಡಿದ್ದಾರೆ, ಇನ್ನು ಕೆಲವರು ಕೊಡುಗೆ ನೀಡಿಲ್ಲ. ಆದರೆ ಸಂವಿಧಾನ ರಚನೆಯ ಬಹುತೇಕ ಭಾರವನ್ನು ಹೊತ್ತವರು ಬಾಬಾ ಸಾಹೇಬರು. ಇದೇ ಕಾರಣಕ್ಕೆ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ.
BREAKING NEWS: ‘ಸ್ಮಶಾನ ಜಮೀನ’ನ್ನು ಖಾಸಗಿಯವರಿಂದ ಖರೀದಿಸಿ: ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶ
ಈ ದೇಶದ ಬಗ್ಗೆ, ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಆಸಕ್ತಿ ಇರುವ ಪ್ರತಿಯೊಬ್ಬರೂ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಮಾಡಿದ ಕಡೇ ಭಾಷಣವನ್ನು ಓದಬೇಕು ಎಂದು ಮನವಿ ಮಾಡುತ್ತೇನೆ. ಇದೊಂದು ಐತಿಹಾಸಿಕ ಭಾಷಣವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಅವರ ಭಾಷಣವನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿಸಿದ್ದೆ. ಇವು ಹತ್ತು ಸಂಪುಟಗಳಲ್ಲಿ ಇವೆ. ಇದನ್ನು ಕೂಡ ಎಲ್ಲರೂ ಓದಬೇಕು ಎಂಬುದು ನನ್ನ ಮನವಿ.
ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತೆ ಪ್ರಮಾಣ ಸುಮಾರು 16% ಇತ್ತು. ಅಂದು ಕಡಿಮೆ ಸಾಕ್ಷರತೆ ಪ್ರಮಾಣ ಇದ್ದಾಗ ಹಳ್ಳಿಗಾಡಿನಲ್ಲಿ ಇದ್ದ ಸಾಮರಸ್ಯ ಇಂದು ಸಾಕ್ಷರತೆ ಪ್ರಮಾಣ 75% ಮೀರಿದ ಸಂದರ್ಭದಲ್ಲಿ ಇಲ್ಲವಾಗಿದೆ. ಶಿಕ್ಷಿತರ ಪ್ರಮಾಣ ಜಾಸ್ತಿಯಾದಂತೆ ಸಾಮರಸ್ಯ ಕಡಿಮೆಯಾಗುತ್ತಿದೆ. ಶಿಕ್ಷಣ ಪಡೆದವರು ಕೂಡ ಧರ್ಮಾಂಧತೆಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ನಾವು ವಿಧಿಯಿಲ್ಲದೆ ಹೇಳಬೇಕಾಗಿದೆ. ಹಿಂದೆ ನಡೆದ ಚುನಾವಣೆಯಲ್ಲಿ ಅಂದರೆ 1983 ರಲ್ಲಿ ಜನರೇ ಮತ ನೀಡಿ, ಹಣವನ್ನೂ ಕೊಟ್ಟಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ, ಇದಕ್ಕೆ ಯಾರು ಕಾರಣ? ಇಂದು ಹಣದ ಮೇಲೆ ಚುನಾವಣೆಗಳು ನಡೆಯುತ್ತಿರುವಾಗ ಪ್ರಾಮಾಣಿಕವಾದ, ಸೈದ್ಧಾಂತಿಕ ರಾಜಕಾರಣವನ್ನು ನಿರೀಕ್ಷೆ ಮಾಡಿದರೆ, ಅದನ್ನು ಕಾಣಲು ಸಾಧ್ಯವಾ?
ಕೆಲವು ದಿನಗಳ ಹಿಂದೆ ಪದವೀಧರ ಕ್ಷೇತ್ರದ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರ ಅನುಭವವನ್ನು ಕೇಳಿನೋಡಿ, ಪರಿಸ್ಥಿತಿ ಏನಾಗಿದೆ ಎಂಬುದು ಅರ್ಥವಾಗುತ್ತೆ. ಆಪರೇಷನ್ ಕಮಲ ರಾಜಕಾರಣ ನಡೆಯುತ್ತಿದೆ, 2008ರಲ್ಲಿ ಮೊದಲ ಬಾರಿಗೆ ಇದು ಆರಂಭವಾಯಿತು. ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿ, ಗೆದ್ದ ಪಕ್ಷಕ್ಕೆ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ನಿಲ್ಲಿಸಿ ಹೇರಳವಾಗಿ ದುಡ್ಡು ಖರ್ಚು ಮಾಡಿ ಅವರನ್ನು ಗೆಲ್ಲಿಸುವುದು ಆಪರೇಷನ್ ಕಮಲ. 2019ರಲ್ಲಿ 17 ಜನರನ್ನು ಆಪರೇಷನ್ ಕಮಲಕ್ಕೆ ಒಳಗಾದರು, 14 ಜನ ಕಾಂಗ್ರೆಸ್ ನವರು ಮತ್ತು 3 ಜನ ಜೆಡಿಎಸ್ ನವರು ಬಿಜೆಪಿ ಸೇರಿದರು. ಹೀಗೆ ಹೋದವರು ಯಾವುದೇ ಕಾರಣಗಳನ್ನು ನೀಡಿದರೂ, ಒಂದು ಪಕ್ಷದ ಸಿದ್ಧಾಂತ, ಕಾರ್ಯಕ್ರಮಗಳ ಮೇಲೆ ಗೆದ್ದು ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗುವುದು ಪ್ರಜಾಪ್ರಭುತ್ವ ರೀತಿಯೇ? ರಾಜೀನಾಮೆ ನೀಡಿದ 15 ರಲ್ಲಿ 12 ಜನ ಆಪರೇಷನ್ ಕಮಲಕ್ಕೆ ಒಳಗಾದವರೇ ಗೆದ್ದರು. ದುಡ್ಡು ತಗೊಂಡಿದ್ದರು, ಅಧಿಕಾರದ ಆಸೆಗೆ ಬೇರೆ ಪಕ್ಷಕ್ಕೆ ಹೋಗಿದ್ದರು, ಚುನಾವನೆಯಲ್ಲಿ ಗೆದ್ದಿದ್ದಾರೆ ಎಂಬ ಮಾತ್ರಕ್ಕೆ ಅವರನ್ನು ಪ್ರಜಾಪ್ರಭುತ್ವದ ರೀತಿ ಆಯ್ಕೆಯಾಗಿದ್ದಾರೆ ಎಂದು ಕರೆಯಬೇಕಾ? ಇವರಿಗೆ ಅವಿದ್ಯಾವಂತರು ಮಾತ್ರ ಮತ ನೀಡಿ ಗೆಲ್ಲಿಸಿದ್ದಾ? ಅವಿದ್ಯಾವಂತರು ಹಣ ತೆಗೆದುಕೊಳ್ಳದೆ ಮತ ಹಾಕುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಮಹತ್ಮಾ ಗಾಂಧಿ ಅಂಥವರನ್ನು ತಂದು ನಿಲ್ಲಿಸಿದ್ರೂ ದುಡ್ಡಿಲ್ಲದೆ ಇದ್ದರೆ ಹೋಗಯ್ಯ ದುಡ್ಡಿಲ್ದೆ ಯಾಕೆ ನಿಂತಿದಿಯಾ ಎಂದು ಹೇಳುವ ಹಾಗೆ ಪರಿಸ್ಥಿತಿ ಬದಲಾಗಿದೆ. ಹೀಗಿರುವಾಗ ಸಿದ್ಧಾಂತವನ್ನು ಯಾರಿಗೆ ಹೇಳೋದು? ಆದರೂ ನಾವು ನಿರಾಶಾವಾದಿಗಳಾಗದೆ ಸೈದ್ಧಾಂತಿಕ ಬದ್ಧತೆಯನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಸಂವಿಧಾನದ ರೀತಿ ಕೆಲಸ ಮಾಡುವುದು ಸೈದ್ಧಾಂತಿಕ, ಸಂವಿಧಾನದ ಬಗೆಗಿನ ಬದ್ಧತೆಯಾಗುತ್ತದೆ. ಹೈಕೋರ್ಟ್ ನ ನಿವೃತ್ತಿ ನ್ಯಾಯ ಮೂರ್ತಿಗಳಾದ ನಾಗಮೋಹನ್ ದಾಸ್ ಅವರು ಸಂವಿಧಾನ ಓದು ಎಂಬ ಪುಸ್ತಕ ಬರೆದಿದ್ದಾರೆ. ಅದನ್ನು ನೀವೆಲ್ಲಾ ಓದಿ.
ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಅವರ ಪ್ರಕಾರ ಒಂದು ಚಿಹ್ನೆ, ಒಂದು ಸಿದ್ಧಾಂತ ಮತ್ತು ಒಬ್ಬ ನಾಯಕ ಇರಬೇಕು. ಆದರೆ ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲ. ಒಮ್ಮೆ ಅಂಬೇಡ್ಕರ್ ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಾ ನಾವು ಕೊಟ್ಟಿರುವ ಸಂವಿಧಾನ ಶ್ರೇಷ್ಠವಾಗಿದೆ ಆದರೆ ಈ ಸಂವಿಧಾನ ಯಾರ ಕೈಯಲ್ಲಿ ಚಲಾವಣೆಯಾಗುತ್ತದೆ ಎಂಬುದು ಕೂಡ ಮುಖ್ಯವಾಗುತ್ತದೆ ಎಂದು ಹೇಳಿದ್ದರು. ಈ ಸಂವಿಧಾನ ಬದಲಾವಣೆ ಮಾಡಬೇಕು ಎಂಬುದು ಬಿಜೆಪಿಯವರ ಉದ್ದೇಶ. ಆದರೆ ಇದು ಸಾಧ್ಯವಿಲ್ಲ ಕಾರಣ ಇದರ ಬದಲಾವಣೆ ಮಾಡಲು ಸಂವಿಧಾನ ಸಭೆಯಲ್ಲಿ ಚರ್ಚೆ ನಡೆದು, ನಂತರ ಬದಲಾವಣೆ ಮಾಡಬೇಕು ಎಂದು ಸಂವಿಧಾನವೇ ಹೇಳಿದೆ. ಒಂದು ವೇಳೆ ಈ ನಿಯಮ ಇಲ್ಲದೆ ಹೋಗಿದ್ದರೆ ನಮ್ಮ ಸಂವಿಧಾನ ಇಷ್ಟೊತ್ತಿಗಾಗಲೇ ಬದಲಾವಣೆ ಆಗಿರೋದು. ವಾಜಪೇಯಿ ಅವರು ಬಂದಾಗಲೇ ಇದನ್ನು ಬದಲಾವಣೆ ಮಾಡಿರುತ್ತಿದ್ದರು.
ಸಮಾನತೆ ಮತ್ತು ಸಮಾ ಸಮಾಜದಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ, ಅವರು ಶ್ರೇಣೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಅವರನ್ನು ಮನುವಾದಿಗಳು ಎಂದು ಕರೆಯುತ್ತಾರೆ. ಕೆಳ ವರ್ಗದ ಜನರನ್ನು ತಾವು ಶೋಷಣೆ ಮಾಡಲು ಸಮಾಜದಲ್ಲಿ ಅಸಮಾನತೆ ಇರಬೇಕು ಎಂದು ಅವರು ಬಯಸುತ್ತಾರೆ. ದೇವನೂರು ಮಹಾದೇವ ಅವರು ಬರೆದಿರುವ ಆರ್.ಎಸ್.ಎಸ್ ಆಳ ಮತ್ತು ಅಗಲ ಎಂಬ ಪುಸ್ತಕವನ್ನು ನಾನು ಓದಿದೆ. ಅವರು ತಮ್ಮ ಪುಸ್ತಕದಲ್ಲಿ ಹೆಡ್ಗೇವಾರ್, ಗೋಲ್ವಾಲ್ಕರ್, ಸಾವರ್ಕರ್ ಅವರು ಯಾವ ಸಂದರ್ಭದಲ್ಲಿ ಯಾವ ಭಾಷಣ ಮಾಡಿದ್ದಾರೆ, ಅವರೆಲ್ಲರ ಬರವಣಿಗೆಗಳನ್ನು ಸಂಗ್ರಹಿಸಿ ಪುಸ್ತಕದಲ್ಲಿ ನಮೂದಿಸಿದ್ದಾರೆ.
ಬಿಜೆಪಿಯವರು ಸಮಾನತೆ ಬಗ್ಗೆ ಬಹಳಾ ಮಾತನಾಡ್ತಾರೆ ಆದರೆ ಅವರ ನಿಜವಾದ ಉದ್ದೇಶ ಏನು ಎಂದು ಏಲ್ಲರೂ ತಿಳಿದುಕೊಳ್ಳಬೇಕು. ಕಾರಣ ನಾವು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಚುನಾವಣೆಗೆ ನಿಲ್ಲಿಸಿದ್ದೇವೆ, ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದ ಎಸ್.ಟಿ ಮಹಿಳೆ ಹೀಗಿದ್ದಾಗ ನಮಗೆ ನೀವು ಸಮಾನತೆ ಬಗ್ಗೆ ಪಾಠ ಹೇಳಿಕೊಡ್ತೀರ ಎಂದು ನಮ್ಮನ್ನೇ ಕೇಳುತ್ತಾರೆ. ಅದಕ್ಕಾಗಿ ನಾನೊಂದು ಪ್ರಶ್ನೆ ಮಾಡುತ್ತೇನೆ, 1925 ರಲ್ಲಿ ಆರಂಭವಾದ ಆರ್,ಎಸ್,ಎಸ್ ನಲ್ಲಿ ಒಂದೇ ಒಂದು ಮೇಲ್ಜಾತಿಯವರನ್ನು ಬಿಟ್ಟರೆ ಬೇರೆ ಯಾರನ್ನು ಸರಸಂಘಚಾಲಕರಾಗಿ ಮಾಡಿದ್ದಾರೆ ಎಂದು ತೋರಿಸಲಿ. ಮುರ್ಮು ಅವರನ್ನು ಮಾಡಬಹುದಿತ್ತಲ್ವಾ? ಮಾಡಿದ್ರಾ? ಹೆಡ್ಗೇವಾರ್ ಅವರು 1925 ರಿಂದ 1940ರಲ್ಲಿ ಅವರು ಸಾಯುವವರೆಗೆ ಸರಸಂಘಚಾಲಕರಾಗಿದ್ದರು. ಈಗ ಮೋಹನ್ ಭಾಗವತ್ ಅವರು ಸರಸಂಘಚಾಲಕರಾಗಿದ್ದಾರೆ. ಅವರ ನಿರ್ದೇಶನದಲ್ಲಿಯೇ ಸರ್ಕಾರ ನಡೆಯುವುದು. ಬಸವರಾಜ ಬೊಮ್ಮಾಯಿ ಮೂಲ ಆರ್,ಎಸ್,ಎಸ್ ನವರಲ್ಲದಿದ್ದರೂ ಅವರು ಆರ್,ಎಸ್,ಎಸ್ ಹೇಳಿದಂತೆ ನಡೆದುಕೊಳ್ಳಬೇಕು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತರಲ್ಲಿ ಎಡ ಮತ್ತು ಬಲ ಎಂದು ಯಾವತ್ತೂ ಹೇಳಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡುವ ಅನುದಾನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗ ಜನಸಂಖ್ಯೆಗೆ ಅನುಗುಣವಾಗಿ ಅನುದಾನದಲ್ಲಿ ಪಾಲನ್ನು ನೀಡಬೇಕು ಎಂದು ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಎಸ್,ಸಿ,ಪಿ/ಟಿ,ಎಸ್,ಪಿ ಕಾನೂನು ಮಾಡಿದ್ದೆ. ಈ ಕಾನೂನು ಬರುವ ಮುಂಚೆ ಬಿಜೆಪಿ ಸರ್ಕಾರದ 2008 ರಿಂದ 2013ರ ಅವಧಿಯಲ್ಲಿ ಒಟ್ಟು ಖರ್ಚಾಗಿದ್ದದ್ದು 22,000 ಕೋಟಿ. ನಾವು ಕಾನೂನು ಜಾರಿ ಮಾಡಿದ ಮೇಲೆ 5 ವರ್ಷದಲ್ಲಿ ಖರ್ಚಾದದ್ದು 88,000 ಕೋಟಿ. ನಮ್ಮ ಸರ್ಕಾರದ ಕೊನೆ ಬಜೆಟ್ ಗಾತ್ರ 2.02 ಲಕ್ಷ ಕೋಟಿ, ಈ ಯೋಜನೆಗೆ ನೀಡಿದ್ದ ಹಣ ಸುಮಾರು 32,000 ಕೋಟಿ. ನಾವು ಅಧಿಕಾರದಿಂದ ಇಳಿದು 4 ವರ್ಷಗಳ ನಂತರ ಈ ವರ್ಷ ಈ ಯೋಜನೆಗೆ ಇಟ್ಟಿರುವ ಹಣ 28,234 ಕೋಟಿಗೆ ಇಳಿದಿದೆ, ಈಗಿನ ಬಜೆಟ್ ಗಾತ್ರ 2.65 ಲಕ್ಷ ಕೋಟಿ. ನನ್ನ ಪ್ರಕಾರ ಇದು 40,000 ಕೋಟಿ ಆಗಬೇಕಿತ್ತು. ಬಿಜೆಪಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಎಷ್ಟು ಜನ ಶಾಸಕರು ಮತ್ತು ಸಂಸದರು ಇದನ್ನು ವಿರೋಧ ಮಾಡಿದ್ದಾರೆ. ಸುಮಾರು 14,000 ಕೋಟಿ ಕಡಿಮೆಯಾಗಿದೆ ಮತ್ತು ಸುಮಾರು 7,785 ಕೋಟಿ ಬೇರೆ ಯೋಜನೆಗಳಿಗೆ ವಿನಿಯೋಗಿಸಲಾಗಿದೆ. ಆದರೂ ಈ ವರ್ಗದ ಜನ ಸುಮ್ಮನಿದ್ದಾರೆ. ಹೀಗಾದಾಗ ಬದಲಾವಣೆ ಸಾಧ್ಯವೇ?
ನಮ್ಮ ಸರ್ಕಾರದ ಅವಧಿಯಲ್ಲಿ ಸದಾಶಿವ ಆಯೋಗದ ವರದಿ ಏಕೆ ಜಾರಿಯಾಗಿಲ್ಲ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈಗ ಬಿಜೆಪಿ ಸರ್ಕಾರ ಬಂದು 4 ವರ್ಷ ಆಯ್ತು, ವರದಿ ಜಾರಿಯಾಗಲಿ ಎಂದು ಸಚಿವರಾದ ಗೋವಿಂದ ಕಾರಜೋಳ ಆಗಲಿ, ನಾರಾಯಣ ಸ್ವಾಮಿ ಆಗಲೀ ಕೇಳಿದ್ದಾರ? ಜಿಗಜಿಣಗಿ ಕೇಳಿದ್ದಾರ? ಅವರನ್ನು ಯಾಕೆ ನೀವು ಪ್ರಶ್ನೆ ಮಾಡಲ್ಲ? ಅವರಿಗೆ ಜೈಕಾರ ಹಾಕೋದು ಸರಿನಾ? ಜನ ಮೊದಲು ನಮ್ಮವರು ಯಾರು ಎಂಬುದನ್ನು ಗುರುತಿಸಲು ಕಲಿಯಬೇಕು. ನಮ್ಮ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿಲ್ಲ ಎಂದು ಪ್ರತಿಭಟನೆ ಮತ್ತು ಪಾದಯಾತ್ರೆ ನಡೆದವು, ಈಗ ಯಾಕೆ ಇವೆಲ್ಲಾ ನಡೆಯುತ್ತಿಲ್ಲ? ಜನರಿಗೆ ಸರಿ, ತಪ್ಪು ತೀರ್ಮಾನ ಮಾಡುವ ಶಕ್ತಿ ಕಡಿಮೆಯಾಗಿರುವುದು ಕಾರಣವಿರಬಹುದಾ?
ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಕಾಂಟ್ರಾಕ್ಟ್ ನಲ್ಲಿ ಮೀಸಲಾತಿ ಬೇಕು ಎಂದು ಕಾನೂನು ರೂಪಿಸಿದ್ದು ನಮ್ಮ ಸರ್ಕಾರ. ಇಡೀ ದೇಶದಲ್ಲೇ ಇಂಥದ್ದೊಂದು ಕಾನೂನು ರೂಪಿಸಿದ ಏಕೈಕ ರಾಜ್ಯ ಕರ್ನಾಟಕ. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಬಡ್ತಿ ಮೀಸಲಾತಿ ಇದ್ದದ್ದನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು, ನಾನು ಮುಖ್ಯಮಂತ್ರಿಯಾಗಿದ್ದಾಗ ರತ್ನಪ್ರಭಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ಅವರಿಂದ ವರದಿ ಪಡೆದು ಸುಪ್ರೀಂ ಕೋರ್ಟ್ ನಿರ್ಣಯವನ್ನು ಪ್ರಶ್ನಿಸಲಾಗಿತ್ತು. ಕೊನೆಗೆ ಸುಪ್ರೀಂಕೋರ್ಟ್ ನಾವು ರೂಪಿಸಿದ ಕಾನೂನನ್ನು ಎತ್ತಿಹಿಡಿಯಿತು. ಬೇರೆ ಯಾವ ರಾಜ್ಯದಲ್ಲಿ ಇದನ್ನು ಮಾಡಿದ್ದಾರೆ ತೋರಿಸಿ. 2018ರ ಚುನಾವಣೆಯಲ್ಲಿ ನಮ್ಮ ಹಿನ್ನಡೆಗೆ ಇದು ಒಂದು ಕಾರಣ. (ಅಹಿಂಸಾ) ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಸಾಮಾನ್ಯ ವರ್ಗದವರು ನನ್ನ ಬಳಿ ಬಂದು ನಿಮಗೆ ನಮ್ಮ ಮತ ಬೇಡ್ವಾ ಎಂದು ಪ್ರಶ್ನಿಸಿದ್ದರು. ನಿಮ್ಮನ್ನು ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದರು. ಅದು ನಿಮಗೆ ಬಿಟ್ಟಿದ್ದು ಎಂದೆ. ಅವರು ಸೋಲಿಸಲು ತೀರ್ಮಾನ ಮಾಡಿದರು ಸರಿ, ನಿಮ್ಮ ಪರವಾಗಿ ನಾನು ಕೆಲಸ ಮಾಡಿದ್ದೆನಲ್ಲಾ ನೀವೇನು ಮಾಡಿದ್ರೀ?
ನರೇಂದ್ರ ಮೋದಿ ಅವರು ಮೇಲ್ಜಾತಿಯಲ್ಲಿರುವ ಬಡವರಿಗೆ 10% ಮೀಸಲಾತಿ ನೀಡಲು ಕಾನೂನು ಮಾಡಿದ್ದಾರೆ. ನಾನು ಇದಕ್ಕೆ ವಿರೋಧ ಮಾಡಿದೆ, ಈಗ ನಿಮ್ಮಲ್ಲಿ ಎಷ್ಟು ಜನ ಬೀದಿಗಿಳಿದು ವಿರೋಧ ಮಾಡಿದ್ದೀರಿ ಹೇಳಿ? ಯಾರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಅವರಿಗೆ ಮೀಸಲಾತಿ ನೀಡಬೇಕು ಎಂದು ಸಂವಿಧಾನದ 15 ಮತ್ತು 16ನೇ ಪರಿಚ್ಛೇದ ಹೇಳಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿ ಮಾಡಿದ ಕಾನೂನು ಅಲ್ಲವಾ? ಆದರೂ ನೀವು ಮೋದಿ ಬಂದಾಗ ಮೋದಿ ಮೋದಿ ಎಂದು ಜೈಕಾರ ಕೂಗುತ್ತೀರ.
ಹಿಜಾಬ್, ಹಲಾಲ್ ಗೆ ವಿರೋಧವನ್ನು ಇನ್ನು ಗಟ್ಟಿಯಾಗಿ ಪಕ್ಷ ವ್ಯಕ್ತಪಡಿಸಬೇಕು ಎಂದು ಇಲ್ಲಿ ಕೆಲವರು ಹೇಳಿದರು, ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ಬಂದಾಗ ಈ ವಿಷಯಗಳ ಬಗ್ಗೆ ನಮ್ಮಲ್ಲಿ ಪೂರ್ಣ ಸ್ಪಷ್ಟತೆ ಇರಬೇಕು ಎಂದು ಹೇಳಿದೆ. ಹಿಂದುತ್ವದಲ್ಲಿ ಸಾಫ್ಟ್ ಮತ್ತು ಹಾರ್ಡ್ ಇಲ್ಲ, ಹಿಂದುತ್ವ ಎಂದರೆ ಹಿಂದುತ್ವವೇ. ಹಿಂದುತ್ವದ ಹೆಸರಲ್ಲಿ ಸಮಾಜದಲ್ಲಿ ಬೆಂಕಿ ಹಾಕುವ ಕೆಲಸ ಮಾಡುತ್ತಾರೆ. ಇದನ್ನು ಹೇಳಿದರೆ ನನ್ನನ್ನು ಹಿಂದೂ ವಿರೋಧಿ, ಮುಸ್ಲೀಮರ ಪರ ಎನ್ನುತ್ತಾರೆ. ಸಂವಿಧಾನ ಏನು ಹೇಳುತ್ತೆ ಗೊತ್ತಾ? ಸಂವಿಧಾನ ಹೇಳುವ ಸಹನೆ, ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಾನು ನಂಬಿಕೆ ಇಟ್ಟುಕೊಂಡಿದ್ದೇನೆ. ಹೀಗಿದ್ದಾಗ ನಾನು ಯಾರ ಪರನಾ, ಯಾರ ವಿರುದ್ಧನಾ? ಇಂಥಾ ವಿಚಾರಗಳಲ್ಲಿ ನನ್ನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ 50 ಜನ ಮುಗಿಬೀಳುತ್ತಾರೆ, ನನ್ನ ಪರ ಆಗ ಯಾರು ಮಾತನಾಡ್ತಾರೆ? ಯಾರೋ ನಾಲ್ಕಾರು ಜನ ಮಾತನಾಡ್ತಾರೆ ಅಷ್ಟೆ.
ಹಿಟ್ಲರ್ ಸುಳ್ಳು ಹೇಳಲು ಒಬ್ಬನನ್ನು ಇಟ್ಟುಕೊಂಡಿದ್ದ. ಈ ಹಿಟ್ಲರ್ ನ್ನೇ ಗೋಲ್ವಾಲ್ಕರ್ ಹೊಗಳಿದ್ದರು. ಪಠ್ಯಪುಸ್ತಕಗಳಲ್ಲಿ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದು ಹಾಕಲಾಗಿತ್ತು. ಈ ಕೆಲಸವನ್ನು ರೋಹಿತ್ ಚಕ್ರತೀರ್ಥನಿಂದ ಮಾಡಿಸಲಾಗಿತ್ತು. ಕುವೆಂಪು, ಕನಕದಾಸ, ನಾರಾಯಣ ಗುರು, ಬಸವಣ್ಣ ಇವರ ಚರಿತ್ರೆಯನ್ನೇ ತಿರುಚಲಾಗಿತ್ತು. ರಾಜಕೀಯ ಪಕ್ಷವಾಗಿ ನಮ್ಮ ವಿರೋಧವನ್ನು ನಾವು ಮಾಡುತ್ತೇವೆ ಆದರೆ ಸಾರ್ವಜನಿಕರ ಪ್ರತಿಕ್ರಿಯೆ ಬಹಳ ಮುಖ್ಯವಾಗುತ್ತೆ.
ನರೇಂದ್ರ ಮೋದಿ ಅವರು 15 ಲಕ್ಷ ಬ್ಯಾಂಕ್ ಅಕೌಂಟ್ ಗೆ ಹಾಕ್ತೇವೆ ಎಂದರು ಹಾಕಿಲ್ಲ, 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಮಾಡಿಲ್ಲ, ನೋಟು ರದ್ದತಿ ಮಾಡಿ ಕಪ್ಪು ಹಣ ತೆಗೆದು ಹಾಕ್ತೇವೆ ಎಂದರು ಮಾಡಿಲ್ಲ, ಬಡವರು ಉಪಯೋಗಿಸುವ ವಸ್ತುಗಳ ಮೇಲೆ ಜಿ,ಎಸ್,ಟಿ ಹಾಕಿದ್ರು, ರೈತರ ಆದಾಯ ದುಪ್ಪಟ್ಟು ಮಾಡ್ತೇವೆ ಎಂದು ಹೇಳಿ ಅದನ್ನು ಮಾಡಿಲ್ಲ. ಆದರೂ ಜನ ಸುಮ್ಮನಿದ್ದಾರೆ. ಮನಮೋಹನ್ ಸಿಂಗ್ ಅವರ ಸರ್ಕಾರ ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು, ಉದ್ಯೋಗ ಹಕ್ಕು, ಶಿಕ್ಷಣದ ಹಕ್ಕು ಕಾಯ್ದೆಗಳನ್ನು ಜಾರಿ ಮಾಡಿ ದೇಶದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಿದ್ದರು. ಇಂದು ಈ ಕಾಯ್ದೆಗಳಿಗೆ ಎಂಥಾ ದುಸ್ಥಿತಿ ಬಂದಿದೆ. ನಾವು ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ವಿರೋಧ ಮಾಡಿದ್ದು ಯಾರು? ಮೀಸಲಾತಿ ತಂದಾಗ, ಮಂಡಲ್ ಕಮಿಷನ್ ವರದಿ ಜಾರಿ ಮಾಡಿದಾಗ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿ ಮಾಡಿದಾಗ ವಿರೋಧ ಮಾಡಿದವರು ಯಾರು? ಬಿಜೆಪಿ ಅವರು ಯಾವಾಗಲೂ ಮೀಸಲಾತಿ ಪರ ಇದ್ದವರಲ್ಲ. ಹೀಗಾಗಿ ಬಿಜೆಪಿಯವರು ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ಮಾಡುತ್ತಿದ್ದಾರೆ. ಇದರಿಂದ ಮೀಸಲಾತಿಯೇ ಇರುವುದಿಲ್ಲ. ಇಂದು ನಿರುದ್ಯೋಗ ಬೃಹದಾಕಾರವಾಗಿ ಬೆಳೆಯುತ್ತಿದೆ, ಕೋವಿಡ್ ಕಾರಣ ಕೊಡುತ್ತಾರೆ. ಬೇರೆ ದೇಶಗಳಲ್ಲೂ ಕೊವಿಡ್ ಬಂದಿತ್ತಲ್ವಾ? ನಮಗಿಂತ ಜಾಸ್ತಿ ಜನಸಂಖ್ಯೆ ಇರುವ ಚೀನಾದಲ್ಲಿ ನಿರುದ್ಯೋಗ ಪ್ರಮಾಣ ನಮಗಿಂತ ಕಡಿಮೆ ಇದೆ ಯಾಕೆ? ಸ್ವದೇಶಿ ವಸ್ತುಗಳ ಉತ್ತೇಜನಕ್ಕೆ ಮೇಕ್ ಇನ್ ಇಂಡಿಯಾ ಅನ್ನು ದೊಡ್ಡದಾಗಿ ಪ್ರಚಾರ ಮಾಡಿದರು. ಆದರೆ ಇಂದು ರಫ್ತಿಗಿಂತ ಆಮದು ಪ್ರಮಾಣ ಜಾಸ್ತಿಯಾಗಿದೆ. ಆದ್ದರಿಂದ ಮೇಕ್ ಇನ್ ಇಂಡಿಯಾಕ್ಕೆ ಅರ್ಥವೇ ಇಲ್ಲವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಚುನಾಯಿತರಾದ ಶಾಸಕರು ಮತ್ತು ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧಾರ ಮಾಡುತ್ತದೆ. ಇದರ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.
ಚುನಾವಣೆ ಸಂದರ್ಭದಲ್ಲಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ಮತ ಕ್ರೋಢೀಕರಣ ಮಾಡುತ್ತಾರೆ. 2019ರ ಚುನಾವಣೆ ವೇಳೆ ಪುಲ್ವಾಮಾ, ಕಾಶ್ಮೀರ ವಿಚಾರವನ್ನು ಮುಂದಕ್ಕೆ ತಂದಿದ್ದರು, ಈಗ ಮತ್ತೆ ಅಂಥದ್ದೇ ಇನ್ಯಾವುದಾದರೂ ವಿಚಾರ ಹುಡುಕುತ್ತಿದ್ದಾರೆ. ಇದರ ಮೂಲಕ ಯುವಕರ ದಾರಿ ತಪ್ಪಿಸಿ, ಅವರ ಮನಸಲ್ಲಿ ದ್ವೇಷ, ಕ್ರೋಧ ಹುಟ್ಟಿಸುತ್ತಾರೆ. ನಮ್ಮ ಮಕ್ಕಳಿಗೆ ನೈಜ ವಿಚಾರವನ್ನು ಹೇಳದೆ, ವಿಷ ಹಾಕಲು ಹೊರಟಿದ್ದಾರೆ. ಪಠ್ಯವನ್ನು ಕೇಸರಿಕರಣ ಮಾಡಲು ಹೊರಟಿದ್ದಾರೆ. ಇದರಿಂದ ನಷ್ಟವಾಗೋದು ನಮಗೆ. ಚುನಾವಣೆಯಲ್ಲಿ ಯಾರಿಗೆ ಅಧಿಕಾರ ಬರುತ್ತೆ, ಬರಲ್ಲ ಮುಖ್ಯವಲ್ಲ, ಆದರೆ ಈ ದೇಶದ ಬಹುತ್ವ ಸಂಸ್ಕೃತಿ ಉಳಿಯಬೇಕು, ದೇಶದ ಸಂವಿಧಾನ ಉಳಿಯಬೇಕು. ಇದಕ್ಕಾಗಿ ನಾವೆಲ್ಲ ಪ್ರಯತ್ನ ಮಾಡೋಣ.