ಪಟ್ನಾ: ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪೂ ಯಾದವ್ ಅವರು ಮಹಿಳೆಯರ ಕುರಿತು ನೀಡಿದ ಅತ್ಯಂತ ಕೀಳುಮಟ್ಟದ ಹೇಳಿಕೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯಕ್ಕೆ ಬರುವ ಮಹಿಳೆಯರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ ಅವರಿಗೆ ಬಿಹಾರ ರಾಜ್ಯ ಮಹಿಳಾ ಆಯೋಗವು ಮಂಗಳವಾರ ನೋಟಿಸ್ ನೀಡಿದೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯ ಕುರಿತು ಮಾತನಾಡುತ್ತಾ ಪಪ್ಪೂ ಯಾದವ್, ಮಹಿಳೆಯರ ವಿರುದ್ಧ ಅವಮಾನಕಾರಿ ಶಬ್ದಗಳನ್ನು ಬಳಸಿದ್ದರು.
”ಭಾರತದಲ್ಲಿ ಮಹಿಳೆಯರನ್ನು ದೇವತೆಗಳೆಂದು ಕರೆಯಲಾಗುತ್ತದೆ, ಆದರೆ ಇಲ್ಲಿ ಅವರಿಗೆ ಗೌರವ ಸಿಗುತ್ತಿಲ್ಲ. ಈ ವ್ಯವಸ್ಥೆ ಮತ್ತು ಸಮಾಜವೇ ಇದಕ್ಕೆ ಕಾರಣ. ಶೇ. 90ರಷ್ಟು ಮಹಿಳೆಯರು ರಾಜಕಾರಣಿಗಳ ಕೋಣೆಗೆ (Bedroom) ಹೋಗದೆ ರಾಜಕೀಯ ಪ್ರವೇಶಿಸಲು ಸಾಧ್ಯವೇ ಇಲ್ಲ,” ಎಂದು ಪಪ್ಪೂ ಯಾದವ್ ಹೇಳಿದ್ದರು.








