ಬೆಂಗಳೂರು: ಹಾವೇರಿಯಲ್ಲಿ 2023ರ ಜನವರಿ 6, 7 ಹಾಗೂ 8ರಂದು ನಡೆಯುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಆಯೋಜಿಸಿರುವ “ಕನ್ನಡ ಜ್ಯೋತಿ”ಯನ್ನು ಹೊತ್ತ “ಕನ್ನಡ ರಥ”ದ ಜಾಥಾಗೆ ಡಿಸೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭುವನಗಿರಿಯಲ್ಲಿರುವ ಕನ್ನಡ ತಾಯಿ ಭುವನೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಗುವುದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಭುವನಗಿರಿಯಿಂದ ಹೊರಟ ಕನ್ನಡ ರಥದ ಜಾಥಾವು ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಲಿದೆ. ಸಮ್ಮೇಳನ ಉದ್ಘಾಟನೆ ಸಂದರ್ಭದಲ್ಲಿ ಕನ್ನಡ ರಥವು ವಿಶೇಷವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡು, ಇದರಲ್ಲಿನ ಕನ್ನಡ ಜ್ಯೋತಿಯಿಂದಲೇ 2023ರ ಜನವರಿ 6ರಂದು ನಡೆಯುವ ಸಮ್ಮೇಳನದ ಉದ್ಘಾಟನೆಯು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ: ಡಿ.3ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ಹಾವೇರಿಯಲ್ಲಿ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನವು ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ “ಕನ್ನಡ ಜ್ಯೋತಿ”ಯನ್ನು ಹೊತ್ತ ಕನ್ನಡದ ಸ್ವಾಭಿಮಾನದ ಸಂಕೇತವಾದ “ಕನ್ನಡ ರಥ”ದ ಜಾಥಾವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದು, ಹೊಸ ಪರಂಪರೆಗೆ ನಾಂದಿ ಹಾಡಲಾಗುತ್ತಿದೆ. ಸಮ್ಮೇಳನವನ್ನು ಐತಿಹಾಸಿಕ ದಾಖಲೆಯನ್ನಾಗಿಸುವ ಸದುದ್ದೇಶದಿಂದ ಕೈಗೊಳ್ಳುತ್ತಿರುವ ಈ ಹೊಸ ಯೋಜನೆಯನ್ನು ಮುಂದಿನ ಎಲ್ಲ ಸಮ್ಮೇಳನಗಳಲ್ಲೂ ಆಚರಿಸುವಂತೆ ಈ ಜಾಥಾವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕನ್ನಡ ರಥದ ಜಾಥಾವು ಆಯಾ ಜಿಲ್ಲೆಗಳಲ್ಲಿ ಸಂಚರಿಸುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು, ರೈತರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾಸಂಸ್ಥೆಗಳು, ಮಠಗಳು, ರೋಟರಿ ಕ್ಲಬ್, ಸ್ತ್ರೀ ಶಕ್ತಿ ಸಂಘಗಳು, ಇತರ ಎಲ್ಲ ಕನ್ನಡ ಸಂಘ-ಸಂಸ್ಥೆಗಳನ್ನು ಜೊತೆಗೂಡಿಸಿಕೊಂಡು “ಕನ್ನಡ ರಥ”ಕ್ಕೆ ಭವ್ಯ ಸ್ವಾಗತವನ್ನು ಕೋರಿ ಬೀಳ್ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕನ್ನಡ ರಥ ಜಾಥವು ಅದ್ಭುತವಾಗಿ ಯಶಸ್ವಿಗೊಳಿಸಲು ಸಮಸ್ತ ಕನ್ನಡಿಗರು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಮನವಿ ಮಾಡಿದ್ದಾರೆ.