ನವದೆಹಲಿ: ವಿಶ್ವದ ಅತಿ ದೊಡ್ಡ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಉದ್ವಿಗ್ನತೆ ಮುಂದುವರಿದಿದ್ದು, ಇರಾನ್‌ನ ನೌಕಾಪಡೆಗಳು ಗುರಿಯಾಗಿಸಿಕೊಂಡಿದ್ದ ಹಡಗಿನಲ್ಲಿದ್ದ 21 ಭಾರತೀಯ ನೌಕರರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಹಡಗು ಸಚಿವಾಲಯ ಗುರುವಾರ ಖಚಿತಪಡಿಸಿದೆ.
ಅಮೆರಿಕದ ದಿಗ್ಬಂಧನದ ನಡುವೆ ಇರಾನ್ ಈ ಮಾರ್ಗದಲ್ಲಿ ಸಾಗುವ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದು, ಭಾರತೀಯ ನೌಕರರ ಸುರಕ್ಷತೆಯ ಬಗ್ಗೆ ಆತಂಕ ಮೂಡಿತ್ತು.
ಪನಾಮ ಧ್ವಜ ಹೊತ್ತ ‘ಯುಫೋರಿಯಾ’ (Euphoria) ಎಂಬ ಕಂಟೈನರ್ ಹಡಗಿನ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದಾಳಿ ನಡೆಸಿತ್ತು. ಈ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿಗಳಿದ್ದರು.
ಹಡಗು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಕೇಶ್ ಮಂಗಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಯುಫೋರಿಯಾ ಹಡಗಿನಲ್ಲಿದ್ದ 21 ಭಾರತೀಯರು ಮತ್ತು ಮತ್ತೊಂದು ಹಡಗು ‘ಎಪಾಮಿನಾಂಡಾಸ್’ನಲ್ಲಿದ್ದ ಒಬ್ಬ ಭಾರತೀಯ ನೌಕರ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ,” ಎಂದು ತಿಳಿಸಿದ್ದಾರೆ.
ಇರಾನ್ ಪಡೆಗಳು ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರೂ ಸಹ, ಯಾವುದೇ ಭಾರತೀಯ ನೌಕರರಿಗೆ ಗಾಯಗಳಾಗಿಲ್ಲ ಮತ್ತು ಅವರು ಹಡಗಿನಲ್ಲೇ ಸುರಕ್ಷಿತವಾಗಿದ್ದಾರೆ ಎಂದು ಸರ್ಕಾರ ಹೇಳಿದೆ.
ಈ ಪ್ರದೇಶದಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ಭಾರತೀಯ ನೌಕಾಪಡೆ ಮತ್ತು ವಿದೇಶಾಂಗ ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿವೆ. ಸದ್ಯ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ.








