ಕಾಠ್ಮಂಡು: ನೇಪಾಳದ ರೋಲ್ಪಾ ಜಿಲ್ಲೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. ಯಾತ್ರಿಕರಿಂದ ತುಂಬಿದ್ದ ಜೀಪೊಂದು ನಿಯಂತ್ರಣ ತಪ್ಪಿ ಸುಮಾರು 800 ಮೀಟರ್ ಆಳದ ಪ್ರಪಾತಕ್ಕೆ ಉರುಳಿದ್ದೇ ಈ ದುರಂತಕ್ಕೆ ಕಾರಣವಾಗಿದೆ.
ಮೃತರೆಲ್ಲರೂ ಪೂರ್ವ ರುಕುಮ್‌ನಿಂದ ‘ಜಲಜಲಾ’ ಎಂಬಲ್ಲಿಗೆ ವೈಶಾಖ ಪೂರ್ಣಿಮೆಯ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲು ತೆರಳುತ್ತಿದ್ದ ಯಾತ್ರಿಕರು ಎಂದು ಗುರುತಿಸಲಾಗಿದೆ.
ರೋಲ್ಪಾ ಜಿಲ್ಲೆಯ ‘ಥಬಾಂಗ್’ ಗ್ರಾಮೀಣ ಮುನ್ಸಿಪಾಲಿಟಿ ವ್ಯಾಪ್ತಿಯ ಬೆಟ್ಟದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಳೆಯಿಂದಾಗಿ ರಸ್ತೆ ಕೆಸರುಮಯವಾಗಿ ಜಾರುತ್ತಿದ್ದುದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ಪ್ರಪಾತಕ್ಕೆ ಬಿದ್ದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನಾ ಸ್ಥಳದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಮತ್ತು ಕಡಿದಾದ ಪ್ರಪಾತವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ. ಸ್ಥಳೀಯ ನಿವಾಸಿಗಳು ಮತ್ತು ಪೊಲೀಸ್ ತಂಡಗಳು ಕಷ್ಟಪಟ್ಟು ಮೃತದೇಹಗಳನ್ನು ಹೊರತೆಗೆಯುತ್ತಿವೆ.







