ರಾಜಧಾನಿ ಬೆಂಗಳೂರಿನ ಯಶವಂತಪುರ ಅಥವಾ ಬೈಯಪ್ಪನಹಳ್ಳಿಯಲ್ಲಿ ದೇಶದ ಅತಿ ದೊಡ್ಡ ವೀಕ್ಷಣಾ ಗೋಪುರ (ಸ್ಕೈಡಾಕ್) ನಿರ್ಮಾಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.
ಬಿಬಿಎಂಪಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ವೀಕ್ಷಣಾ ಗೋಪುರ ನಿರ್ಮಾಣ ಯೋಜನೆಯ ಪ್ರಸ್ತಾವನೆಯನ್ನು ತಯಾರಿಸಿತ್ತು. ಚುನಾವಣೆ ಹಿನ್ನೆಲೆ, ಕೆಲದಿನಗಳ ಕಾಲ ಈ ಯೋಜನೆ ಮುನ್ನೆಲೆಗೆ ಬಂದಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ವೀಕ್ಷಣಾ ಗೋಪುರ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆಗೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು, ಕೆಲವು ಖಾಸಗಿ ಕಂಪನಿಗಳ ಮುಖ್ಯಸ್ಥರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಯಶವಂತಪುರ ಅಥವಾ ಬೈಯಪ್ಪನಹಳ್ಳಿ ಎನ್‌ಜಿಎಫ್ ಬಳಿ ವಿಕ್ಷಣಾ ಗೋಪುರ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾಪವಿದೆ. ಈ ಹಿನ್ನೆಲೆ, ಯಾವ ಸ್ಥಳದಲ್ಲಿ ಗೋಪುರ ನಿರ್ಮಾಣ ಮಾಡಿದರೇ ಸೂಕ್ತ ಎಂಬ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಿಕೊಂಡು ತೆಗೆದುಕೊಂಡು ಬರುವಂತೆ ಸಿಎಂ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಗೋಪುರ ಬರೋಬ್ಬರಿ 821 ಅಡಿ ಎತ್ತರ ಇರಲಿದ್ದು, ಈ ಕಟ್ಟಡದ ತುದಿಯಲ್ಲಿ ಸುಮಾರು 100ರಿಂದ 150 ಜನರು ನಿಂತು ಸುತ್ತಲೂ 360 ಡಿಗ್ರಿ ಕೋನದಲ್ಲಿ ಇಡೀ ಬೆಂಗಳೂರನ್ನು ನೋಡಬಹುದಾಗಿದೆ. ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ವೀಕ್ಷಣಾ ಗೋಪುರ ದೇಶದಲ್ಲಿಯೇ ಅತಿ ದೊಡ್ಡದು ಎಂದೆನಿಸಿಕೊಳ್ಳಲಿದೆ. ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ 821 ಅಡಿ ಎತ್ತರದ ವೀಕ್ಷಣಾ ಗೋಪುರದ ತುಟ್ಟತುದಿಗೆ ಸಾರ್ವಜನಿಕರಿಗೆ ಹೋಗಲು ಅವಕಾಶ ಕಲ್ಪಿಸಲಾಗುತ್ತದೆ. ಬೇರೆ ರಾಜ್ಯ, ದೇಶಗಳಿಂದ ಬೆಂಗಳೂರು ನೋಡಲು ಬರುವ ಪ್ರವಾಸಿಗರಿಗೆ ಈ ವೀಕ್ಷಣಾ ಗೋಪುರ ಒಂದು ಸುಂದರ ಅನುಭೂತಿ ನೀಡಲಿದೆ. ಬೆಂಗಳೂರಿನ ಐಕಾನಿಕ್ ಕಟ್ಟಡಗಳಲ್ಲಿ ಈ ಸ್ಕೈಡಾಕ್ ಕೂಡ ಒಂದಾಗಲಿದೆಯಾಗಿದೆ.