ಪುಣೆ: ನಿರುದ್ಯೋಗದ ವಿಷಯದಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರದ ಬಿಜೆಪಿ ಸರ್ಕಾರಗಳನ್ನು ಟೀಕಿಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ʻಮದುವೆಯ ವಯಸ್ಸಿನ ಯುವಕರಿಗೆ ವಧುಗಳು ಸಿಗುತ್ತಿಲ್ಲʼ ಎಂದು ಬುಧವಾರ ಹೇಳಿದ್ದಾರೆ.
ಇಲ್ಲಿ ಎನ್ಸಿಪಿಯ ಜನ ಜಾಗರ್ ಯಾತ್ರೆ ಅಭಿಯಾನಕ್ಕೆ ಚಾಲನೆ ನೀಡುವ ಮೊದಲು ಮಾತನಾಡಿದ ಪವಾರ್, ಸಮುದಾಯಗಳ ನಡುವೆ ಬಿರುಕು ಮೂಡಿಸಲಾಗುತ್ತಿದೆ ಮತ್ತು ಹಣದುಬ್ಬರ ಮತ್ತು ನಿರುದ್ಯೋಗದಂತಹ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
“ಒಮ್ಮೆ ನಾನು ಪ್ರಯಾಣ ಮಾಡುವಾಗ 25 ರಿಂದ 30 ವರ್ಷದೊಳಗಿನ 15 ರಿಂದ 20 ಪುರುಷರು ಹಳ್ಳಿಯ ಸಾರ್ವಜನಿಕ ಚೌಕದಲ್ಲಿ ಸುಮ್ಮನೆ ಕುಳಿತಿರುವುದನ್ನು ನಾನು ಕಂಡು ಅವರೊಂದಿಗೆ ಮಾತನಾಡಿದೆ. ಈ ವೇಳೆ ನೀವೆಲ್ಲರೂ ಮದುವೆಯಾಗಿದ್ದೀರಾ ಎಂದು ಕೇಳಿದ್ಕೆ, ಅದಕ್ಕೆ ಅವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಅಲ್ಲಿದ್ದವರು ಕೆಲವರು ಪದವೀಧರರು, ಕೆಲವರು ಸ್ನಾತಕೋತ್ತರ ಪದವೀಧರರಾಗಿರುವುದಾಗಿ ಹೇಳಿಕೊಂಡಿದ್ದು, ನಮಗೆ ಉದ್ಯೋಗವಿಲ್ಲದ ಕಾರಣ ಯಾರೂ ವಧುಗಳನ್ನು ನೀಡಲು ಸಿದ್ಧರಿಲ್ಲ ಎಂದರು” ಎಂದು ಪವಾರ್ ಹೇಳಿದರು.
ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಈ ದೂರುಗಳು ಹೆಚ್ಚು ಕೇಳಿಬರುತ್ತಿರುವುದಾಗಿ ಪವಾರ್ ಹೇಳಿದ್ದಾರೆ.