ಕೆಎನ್ಎನ್ಸಿನಿಮಾಡೆಸ್ಕ್: ಈವತ್ತಿಗೂ ಸಿನಿಮಾ ಹಾಡುಗಳಿಗೋಸ್ಕರ ಹಂಬಲಿಸಿ ಕಾಯುವ ದೊಡ್ಡದೊಂದು ವರ್ಗವೇ ಇದೆ. ಹೊಸಾ ಸಿನಿಮಾವೊಂದು ಅನೌನ್ಸ್ ಆದಾಕ್ಷಣವೇ ಹಾಡುಗಳಿಗಾಗಿ ಆ ವರ್ಗ ಕಾದು ಕೂರುತ್ತದೆ. ಬನಾರಸ್ ಚಿತ್ರ ಅಂಥಾ ಸಂಗೀತ ಪ್ರೇಮಿಗಳನ್ನೆಲ್ಲ ಸಂಪೂರ್ಣವಾಗಿ ಸಂತೃಪ್ತಗೊಳಿಸಿದೆ. ಝೈದ್ ಖಾನ್ ನಾಯಕನಾಗಿ ನಟಿಸಿರುವ ಈ ಚಿತ್ರದ ಒಂದೊಂದು ಹಾಡೂ ತನ್ನದೇ ಆದ ದಾಖಲೆ ಬರೆದಿದೆ. ಇದೀಗ ಈ ವರ್ಷದ ಚೆಂದದ ಹಾಡುಗಳ ಪಟ್ಟಿಯಲ್ಲಿ ಬನಾರಸ್ ಹಾಡುಗಳು ಮೊದಲ ಸ್ಥಾನ ಗಿಟ್ಟಿಸಿಕೊಂಡಿವೆ. ಹೀಗಿರುವಾಗಲೇ ಮತ್ತೊಂದು ಮೋಹಕವಾದ ವೀಡಿಯೋ ಸಾಂಗ್ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ!
ಬೆಳಕಿನ ಕವಿತೆ ಎಂಬ ಶೀರ್ಷಿಕೆಯ ಈ ವೀಡಿಯೋ ಸಾಂಗ್, ಇದೇ 22ನೇ ತಾರೀಕು ಸಂಜೆ 6.30ಕ್ಕೆ ಬಿಡುಗಡೆಗೊಳ್ಳಲಿದೆ. ಈ ಶೀರ್ಷಿಕೆ ಕೇಳಿದರೇನೇ ಆ ಹಾಡು ಅದೆಷ್ಟು ಮುದ್ದಾಗಿರಬಹುದೆಂಬ ಅಂದಾಜು ಸಿಗುತ್ತದೆ. ಜಯತೀರ್ಥ ನಿರ್ದೇಶನದ ಚಿತ್ರವೆಂದ ಮೇಲೆ ಹಾಡುಗಳ ಮೇಲೊಂದು ನಿರೀಕ್ಷೆ ಇದ್ದೇ ಇರುತ್ತದೆ. ಆದರೆ, ಬನಾರಸ್ ವಿಚಾರದಲ್ಲಿ ಅವರು ಅಚ್ಚರಿಯ ಮೇಲೆ ಅಚ್ಚರಿ ಮೂಡಿಸುತ್ತಾ ಸಾಗಿ ಬಂದಿದ್ದಾರೆ. ಇಡೀ ಚಿತ್ರದ ಆತ್ಮದಂತಿದ್ದ ಮಾಯಗಂಗೆ ಎಂಬ ಹಾಡು ಅದೆಂಥಾ ಕ್ರೇಜ್ ಸೃಷ್ಟಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಇದೀಗ ಬೆಳಕಿನ ಕವಿತೆ ಎಲ್ಲರ ಮುಂದೆ ತೆರೆದುಕೊಳ್ಳುವ ಕ್ಷಣಗಳು ಹತ್ತಿರಾಗಿವೆ. ಹೀಗೆ ಬನಾರಸ್ ಹಾಡುಗಳು ಸೂಪರ್ ಹಿಟ್ ಆಗುತ್ತಿರೋದರಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಪಾತ್ರ ದೊಡ್ಡದಿದೆ. ಸಂಗೀತ ಮಾಂತ್ರಿಕ ಎಂಬ ಬಿರುದಿಗೆ ತಕ್ಕುದಾಗಿರುವ ಅಜನೀಶ್, ಮಾಯಗಂಗೆಯ ಮೂಲಕ ಮಾಡಿದ್ದ ಮೋಡಿ ಅಂತಿಂಥಾದ್ದಲ್ಲ. ಅದಿನ್ನೂ ಚಾಲ್ತಿಯಲ್ಲಿರುವಾಗಲೇ ಬೆಳಕಿನ ಕವಿತೆ ಎಂಬ ಚೆಂದದ ಹಾಡನ್ನು ಸೃಷ್ಟಿಸಿದ್ದಾರೆ. ಈ ಹಾಡಿನಲ್ಲಿ ಝೈದ್ ಖಾನ್ ಮತ್ತು ಸೋನಲ್ ಮೊಂತೇರೋ ಮತ್ತಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರಂತೆ. ಬಿಡುಗಡೆಗೆ ದಿನಗಣನೆ ಶುರುವಾಗಿರುವ ಈ ಹೊತ್ತಿನಲ್ಲಿ ಬರಲಿರುವ ಬೆಳಕಿನ ಕವಿತೆ, ಬನಾರಸ್ ಅನ್ನು ಮತ್ತಷ್ಟು ಮಿರುಗಿಸಲಿದೆ.