ಬೆಂಗಳೂರು: ರಾಜಧಾನಿಯ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು (APMC) ಶೀಘ್ರದಲ್ಲೇ ದಾಸನಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ತಿಳಿಸಿದ್ದಾರೆ. ವಿಶೇಷವಾಗಿ ಈರುಳ್ಳಿ, ಆಲೂಗಡ್ಡೆ ಹಾಗೂ ಶುಂಠಿ ಮಾರುಕಟ್ಟೆಗಳು ದಾಸನಪುರಕ್ಕೆ ಶಿಫ್ಟ್ ಆಗಲಿದ್ದು, ಈ ಮೂಲಕ ಯಶವಂತಪುರ ಭಾಗದ ದಶಕಗಳ ಕಾಲದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಲಾಗಿದೆ.
68 ಎಕರೆ ವಿಶಾಲ ಪ್ರದೇಶದಲ್ಲಿ ಮಾರುಕಟ್ಟೆ: ದಾಸನಪುರದಲ್ಲಿ ಮಾರುಕಟ್ಟೆಗಾಗಿ ಒಟ್ಟು 68 ಎಕರೆ ಜಾಗವನ್ನು ಮೀಸಲಿಡಲಾಗಿದೆ. ವ್ಯಾಪಾರಸ್ಥರಿಗೆ ಮತ್ತು ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುಸಜ್ಜಿತ ವ್ಯವಸ್ಥೆ ಮಾಡಲಾಗುತ್ತಿದೆ. ಯಶವಂತಪುರ ಮಾರುಕಟ್ಟೆಯಿಂದ ಸುಮಾರು 800 ಮಳಿಗೆಗಳು ದಾಸನಪುರಕ್ಕೆ ಸ್ಥಳಾಂತರಗೊಳ್ಳಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ವಿಶೇಷ ಒತ್ತು: ಮಾರುಕಟ್ಟೆಗೆ ಬರುವ ವಾಹನಗಳ ನಿಲುಗಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪಾರ್ಕಿಂಗ್ ಉದ್ದೇಶಕ್ಕಾಗಿಯೇ ಹೆಚ್ಚುವರಿಯಾಗಿ 10 ಎಕರೆ ಜಾಗವನ್ನು ಲೀಸ್ ಪಡೆದುಕೊಳ್ಳಲಾಗಿದೆ. ಇದರಿಂದಾಗಿ ಮಾರುಕಟ್ಟೆ ಪ್ರದೇಶದಲ್ಲಿ ಲಾರಿ ಹಾಗೂ ಇತರೆ ಸರಕು ಸಾಗಣೆ ವಾಹನಗಳು ರಸ್ತೆಯಲ್ಲೇ ನಿಂತು ಸಂಚಾರಕ್ಕೆ ಅಡ್ಡಿಯಾಗುವುದು ತಪ್ಪಲಿದೆ.
ಉತ್ತರ ಕರ್ನಾಟಕದ ರೈತರಿಗೆ ವರದಾನ: ಈ ಸ್ಥಳಾಂತರ ಪ್ರಕ್ರಿಯೆಯು ಕೇವಲ ಬೆಂಗಳೂರಿನ ಟ್ರಾಫಿಕ್ ಸುಧಾರಿಸುವುದಲ್ಲದೆ, ರೈತರಿಗೂ ಸಹಕಾರಿಯಾಗಲಿದೆ. “ತುಮಕೂರು ರಸ್ತೆಯ ಮೂಲಕ ಬರುವ ಉತ್ತರ ಕರ್ನಾಟಕದ ರೈತರಿಗೆ ನಗರದ ಒಳಭಾಗಕ್ಕೆ ಬರುವ ಕಿರಿಕಿರಿ ತಪ್ಪಲಿದೆ. ದಾಸನಪುರವು ಹೊರವಲಯದಲ್ಲಿ ಇರುವುದರಿಂದ ರೈತರು ಸುಲಭವಾಗಿ ತಮ್ಮ ಬೆಳೆಗಳನ್ನು ತಂದು ಮಾರಾಟ ಮಾಡಬಹುದು,” ಎಂದು ಸಚಿವ ಶಿವಾನಂದ್ ಪಾಟೀಲ್ ತಿಳಿಸಿದ್ದಾರೆ.








