ಮಂಡ್ಯ: ಭಾರತ್ ಜೋಡೋ ಯಾತ್ರೆಯನ್ನು ಜನರು ಮುಂದುವರೆಸುತ್ತಾರೆ. ಇಡಿ ನೀಡಿರುವಂತ ಸಮಸ್ಸ್ ಹಿನ್ನಲೆಯಲ್ಲಿ ಇಂದು ದೆಹಲಿಗೆ ತೆರಳಲಿದ್ದು, ನಾಳೆ ಬೆಳಿಗ್ಗೆ ಇಡಿ ಅಧಿಕಾರಿಗಳ ಮುಂದೆ ವಿಚಾರಣೆ ನಾನು ಮತ್ತು ನನ್ನ ಸಹೋದರ ಹಾಜರಾಗುತ್ತೇವೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( DK Shivakumar ) ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಭಾರತ್ ಜೋಡೋ ಯಾತ್ರೆಯ ಬಳಿಯಲ್ಲಿ ಮಾತನಾಡಿದಂತ ಅವರು, ಶ್ರೀಮತಿ ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿದ್ದು., ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಗೆ ಬಂದು ಭಾಗವಹಿಸಿದ್ದಾರೆ. ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಅವರು ರಾಜ್ಯಕ್ಕೆ ಬಂದು ಸಣ್ಣ ಗ್ರಾಮದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಮ್ಮ ಪರವಾಗಿ ಪ್ರಾರ್ಥಿಸಿದ್ದಾರೆ. ಜತೆಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ಎಲ್ಲ ವರ್ಗದ ಜನರ ಜತೆ ಹೆಜ್ಜೆ ಹಾಕಿ ನಮಗೆ ಶಕ್ತಿ ತುಂಬಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಅವರಿಗೆ ರಾಜ್ಯದ ಜನತೆ ಪರವಾಗಿ ಧನ್ಯವಾದ ಸಲ್ಲಿಸಿ ಅಭಿನಂದನೆ ತಿಳಿಸುತ್ತೇನೆ. ಕಾಂಗ್ರೆಸ್ ಪಕ್ಷ ಕಷ್ಟಕಾಲದಲ್ಲಿ ಇದ್ದಾಗ ಆ ಹೆಣ್ಮುಮಗಳು ಪಕ್ಷದ ಪರವಾಗಿ ನಿಂತು ಶಕ್ತಿ ತುಂಬಿದ್ದಾರೆ ಎಂದರು.
ನಾಗಮೋಹನ್ ದಾಸ್ ಅವರ ವರದಿ ಜಾರಿ ಆಗಬೇಕು ಎಂದು ನಾವು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಇದು ಭಾರತ ಜೋಡೋ ಯಾತ್ರೆಯ ಪ್ರಮುಖ ವಿಚಾರಗಳಲ್ಲಿ ಒಂದಾದ ಸಾಮಾಜಿಕ ನ್ಯಾಯದ ಭಾಗವಾಗಿದೆ. ಎಲ್ಲ ವರ್ಗದ ಜನರಿಗೆ ಶಕ್ತಿ ತುಂಬಲು ರಾಹುಲ್ ಗಾಂಧಿ ಅವರು ಎಲ್ಲ ವರ್ಗದ ಜನರ ಜತೆ ಮಾತುಕತೆ ನಡೆಸಿ ಅವರ ಸಮಸ್ಯೆ ಆಲಿಸುತ್ತಿದ್ದಾರೆ ಎಂದು ಹೇಳಿದರು.
ಎಲ್ಲರೂ ಕೂತು ಚರ್ಚಿಸಿ ಪಕ್ಷದ ನಿಲುವು ಪ್ರಕಟಿಸಿದ್ದು, ಸರ್ಕಾರ ಸಂಸತ್ ಅಧಿವೇಶನಕ್ಕೆ ಕಾಯದೆ, ಒಂದು ತಿಂಗಳಲ್ಲಿ ರಾಜ್ಯದಲ್ಲಿ ಜಾರಿ ತಂದು ನಂತರ ಕೇಂದ್ರ ಮಟ್ಟದಲ್ಲಿ ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿಗೆ ತರಬಹುದು. ಈಗಾಗಲೇ ಹಲವು ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸಿದ್ದು, ರಾಜ್ಯದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ವಿಚಾರವನ್ನು ಜಾರಿಗೆ ತರಬೇಕು ಎಂದು ಪಕ್ಷದ ಪರವಾಗಿ ಒತ್ತಾಯಿಸಿದರು.
ಇನ್ನು ಇಡಿ ವಿಚಾರಣೆಗೆ ಸಂಬಂದಿಸಿದಂತೆ ಅಧಿಕಾರಿಗಳು ನಮ್ಮ ಮೇಲಿದ್ದ ಪ್ರಕರಣಗಳ ಜತೆಗೆ ಬೇರೆ ಪ್ರಕರಣಗಳ ವಿಚಾರವಾಗಿಯೂ ಸಮನ್ಸ್ ನೀಡಿದ್ದು, ಈ ಯಾತ್ರೆ ಮುಗಿದ ನಂತರ ವಿಚಾರಣೆಗೆ ಹಾಜರಾಗುವುದಾಗಿ ನಾವು ಕಾಲಾವಕಾಶ ಕೋರಿದ್ದೆವು. ಆದರೆ ಇಂದು ಮತ್ತೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಇಡಿ ಕಚೇರಿಗೆ ಬಂದು ಹೇಳಿಕೆ ನೀಡಬೇಕು ಎಂದು ತಿಳಿಸಿದ್ದಾರೆ. ನಾನು ನಮ್ಮ ನಾಯಕರ ಜತೆ ಚರ್ಚೆ ಮಾಡಿದ್ದು, ನಮ್ಮ ನಾಯಕರು ವಿಚಾರಣೆಗೆ ಹಾಜರಾಗುವಂತೆ ಸಲಹೆ ನೀಡಿದ್ದಾರೆ. ನಾವು ಕಾನೂನು ರೂಪಿಸುವವರಾಗಿದ್ದು, ನಾವು ಕಾನೂನಿಗೆ ಗೌರವ ನೀಡಬೇಕಿದೆ. ಈ ಯಾತ್ರೆಯನ್ನು ಜನರು ನಡೆಸುತ್ತಾರೆ ಎಂದು ಪಕ್ಷ ಆದೇಶ ನೀಡಿದ್ದು, ನಾನು ಹಾಗೂ ನನ್ನ ಸಹೋದರ ಇಂದು ದೆಹಲಿಗೆ ತೆರಳಿ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಸ್ಥರು ರಾಹುಲ್ ಗಾಂಧಿ ಅವರ ಜತೆ ಚರ್ಚೆ ಮಾಡುವಾಗ ಹಳ್ಳಿಗಳಲ್ಲಿ ಸಾಲಭಾಧೆ, ಬಡ್ಡಿ, ಚಕ್ರಬಡ್ಡಿ ಹೊರೆ ವಿಚಾರವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಹಾಲು ಉತ್ಪಾದಕರ ವಿಚಾರದಲ್ಲಿ ಮೇವಿನ ಬೆಲೆ ಹೆಚ್ಚಾಗುತ್ತಿದ್ದು, ಸರ್ಕಾರದ ಹಾಲು ಖರೀದಿ ಬೆಲೆ ಹೆಚ್ಚಾಗಿಲ್ಲ ಎಂದು ರೈತರು ನೋವು ತೋಡಿಕೊಂಡಿದ್ದಾರೆ ಎಂದರು.