ಬೆಳಗಾವಿ: ಪ್ರಿಯಕರನೊಂದಿಗೆ ಜೀವನ ನಡೆಸಲು ಸ್ವಂತ ಪತಿಯ ಮನೆಯಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೂಡಲಗಿ ತಾಲೂಕಿನ ಮೂಲದ ಹಸೀನಾ ನದಾಫ್ ಎಂಬಾಕೆಗೆ ಎರಡು ತಿಂಗಳ ಹಿಂದೆಯಷ್ಟೇ ಹೊಸಕೋಟಿ ಗ್ರಾಮದ ಶರೀಫ್ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ ಮದುವೆಯ ನಂತರವೂ ಈಕೆ ತನ್ನ ಪ್ರಿಯಕರ ಹಣಮಂತ ಮಾರಾಪೂರ ಜೊತೆ ಸಂಪರ್ಕದಲ್ಲಿದ್ದಳು. ಪ್ರಿಯಕರನ ಜೊತೆ ಓಡಿಹೋಗಲು ಸಂಚು ರೂಪಿಸಿದ ಈಕೆ, ತನ್ನ ಪತಿಯ ಮನೆಯಲ್ಲಿದ್ದ ಸುಮಾರು 21 ಲಕ್ಷ ರೂ. ಮೌಲ್ಯದ 154.6 ಗ್ರಾಂ ಚಿನ್ನಾಭರಣಳನ್ನು ದೋಚಿದ್ದಾಳೆ.ಬಂಧಿತರಿಂದ 11 ಸಾವಿರ ರೂ. ಮೌಲ್ಯದ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆಯಲ್ಲಿ ಕಳ್ಳತನವಾದ ಬಗ್ಗೆ ದಿಲ್ಶಾನ್ ನದಾಫ್ ಎಂಬುವವರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತನಿಖೆ ಕೈಗೊಂಡು, ಕೇವಲ 48 ಗಂಟೆಗಳ ಒಳಗೆ ಆರೋಪಿಗಳಾದ ಹಸೀನಾ ಮತ್ತು ಹಣಮಂತ ಮಾರಪುರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಮತ್ತು ಪಿಎಸ್ಐ ಬಸವರಾಜ್ ಕೊಣ್ಣೂರೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪೊಲೀಸರ ಈ ಚುರುಕಿನ ಕಾರ್ಯಕ್ಕೆ ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳು ಜೈಲು ಪಾಲಾಗಿದ್ದಾರೆ.








