ವಿದೇಶ ಪ್ರಯಾಣದ ಬಗ್ಗೆ ಮಾತನಾಡುವಾಗ ಮೊದಲು ನೆನಪಿಗೆ ಬರುವುದು ಪಾಸ್‌ಪೋರ್ಟ್. ಆದರೆ, ನೀವು ಗಮನಿಸಿದ್ದೀರಾ? ಪ್ರತಿಯೊಬ್ಬರ ಪಾಸ್‌ಪೋರ್ಟ್ ಬಣ್ಣ ಒಂದೇ ತರ ಇರುವುದಿಲ್ಲ. ಪಾಸ್‌ಪೋರ್ಟ್‌ನ ಈ ಬಣ್ಣಗಳು ಕೇವಲ ವಿನ್ಯಾಸಕ್ಕಾಗಿ ಅಲ್ಲ; ಅವುಗಳ ಹಿಂದೆ ಒಂದು ನಿರ್ದಿಷ್ಟ ಕೋಡಿಂಗ್ ಇರುತ್ತದೆ. ಇಮಿಗ್ರೇಷನ್ ಅಧಿಕಾರಿಗಳು ನಿಮ್ಮ ಪಾಸ್‌ಪೋರ್ಟ್ ಬಣ್ಣ ನೋಡಿಯೇ ನಿಮ್ಮ ಗುರುತು, ಸ್ಥಾನಮಾನ ಮತ್ತು ಪ್ರಯಾಣದ ಉದ್ದೇಶವನ್ನು ಕ್ಷಣಾರ್ಧದಲ್ಲಿ ಪತ್ತೆಹಚ್ಚುತ್ತಾರೆ.
ಭಾರತದಲ್ಲಿ ಮುಖ್ಯವಾಗಿ ನಾಲ್ಕು ಬಣ್ಣಗಳ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತದೆ. ಅವುಗಳ ಮಹತ್ವ ಹೀಗಿದೆ:
ಭಾರತದ 4 ಬಣ್ಣದ ಪಾಸ್‌ಪೋರ್ಟ್‌ಗಳು: ಯಾರಿಗೆ ಯಾವುದು?
ನೀಲಿ ಪಾಸ್‌ಪೋರ್ಟ್ (Type-P): ಇದು ಸಾಮಾನ್ಯ ನಾಗರಿಕರಿಗೆ ನೀಡುವ ಪಾಸ್‌ಪೋರ್ಟ್. ಇಲ್ಲಿ ‘P’ ಎಂದರೆ ಪರ್ಸನಲ್ (Personal). ಶಿಕ್ಷಣ, ಪ್ರವಾಸ ಅಥವಾ ವ್ಯಾಪಾರ ಉದ್ದೇಶಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ಇದನ್ನು ನೀಡಲಾಗುತ್ತದೆ.
ಬಿಳಿ ಪಾಸ್‌ಪೋರ್ಟ್ (Type-S): ಇದು ಅತ್ಯಂತ ವಿಶೇಷವಾದದ್ದು. ಇಲ್ಲಿ ‘S’ ಎಂದರೆ ಸರ್ವಿಸ್ (Service). ಸರ್ಕಾರಿ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುವ ಅಧಿಕಾರಿಗಳಿಗೆ ಇದನ್ನು ನೀಡಲಾಗುತ್ತದೆ. ಇಮಿಗ್ರೇಷನ್ ಸಮಯದಲ್ಲಿ ಇವರಿಗೆ ವಿಶೇಷ ಆದ್ಯತೆ ಸಿಗುತ್ತದೆ.
ಮರೂನ್ ಪಾಸ್‌ಪೋರ್ಟ್ (Type-D): ಇದು ಭಾರತದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್. ‘D’ ಎಂದರೆ ಡಿಪ್ಲೊಮ್ಯಾಟಿಕ್ (Diplomatic). ಸಂಸದರು, ರಾಯಭಾರಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾತ್ರ ಇದನ್ನು ನೀಡಲಾಗುತ್ತದೆ. ಇವರಿಗೆ ವಿದೇಶಗಳಲ್ಲಿ ಬಂಧನದಿಂದ ವಿನಾಯಿತಿ ಮತ್ತು ಅತಿ ವೇಗದ ಇಮಿಗ್ರೇಷನ್ ಸೌಲಭ್ಯವಿರುತ್ತದೆ.
ಕಿತ್ತಳೆ (Orange) ಪಾಸ್‌ಪೋರ್ಟ್: 10ನೇ ತರಗತಿಗಿಂತ ಕಡಿಮೆ ಓದಿದವರಿಗೆ ಈ ಪಾಸ್‌ಪೋರ್ಟ್ ನೀಡಲಾಗುತ್ತದೆ. ಇದನ್ನು ‘ECR’ (ಇಮಿಗ್ರೇಷನ್ ಚೆಕ್ ರಿಕ್ವೈರ್ಡ್) ಎಂದು ಕರೆಯಲಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶ.
ಜಗತ್ತಿನಾದ್ಯಂತ ಪಾಸ್ ಪೋರ್ಟ್ ಬಣ್ಣಗಳ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ವಿಶ್ವದಾದ್ಯಂತ ಪಾಸ್‌ಪೋರ್ಟ್ ಬಣ್ಣಗಳ ಆಯ್ಕೆಯು ಆಯಾ ದೇಶದ ರಾಜಕೀಯ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ:
ಕೆಂಪು/ಮರೂನ್: ಯುರೋಪಿಯನ್ ಯೂನಿಯನ್ (EU) ದೇಶಗಳಲ್ಲಿ ಏಕತೆ ಮತ್ತು ಐತಿಹಾಸಿಕ ಪರಂಪರೆಯನ್ನು ಬಿಂಬಿಸಲು ಈ ಬಣ್ಣವನ್ನು ಬಳಸಲಾಗುತ್ತದೆ.
ನೀಲಿ: ಅಮೆರಿಕ, ಕೆನಡಾ ಮತ್ತು ದಕ್ಷಿಣ ಅಮೆರಿಕಾದ ದೇಶಗಳು ಇದನ್ನು ‘ಹೊಸ ಪ್ರಪಂಚದ’ ಸಂಕೇತವಾಗಿ ಬಳಸುತ್ತವೆ.
ಹಸಿರು: ಬಹುತೇಕ ಮುಸ್ಲಿಂ ರಾಷ್ಟ್ರಗಳು (ಉದಾ: ಸೌದಿ ಅರೇಬಿಯಾ, ಪಾಕಿಸ್ತಾನ) ಹಸಿರು ಬಣ್ಣವನ್ನು ಬಳಸುತ್ತವೆ. ಇಸ್ಲಾಂ ಧರ್ಮದಲ್ಲಿ ಈ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದು ಇದಕ್ಕೆ ಕಾರಣ.
ಕಪ್ಪು: ಇದು ಅತ್ಯಂತ ಅಪರೂಪದ ಬಣ್ಣ. ನ್ಯೂಜಿಲೆಂಡ್ ತನ್ನ ರಾಷ್ಟ್ರೀಯ ಗುರುತಿಗಾಗಿ ಮತ್ತು ಅಂಗೋಲಾದಂತಹ ಕೆಲವು ಆಫ್ರಿಕನ್ ದೇಶಗಳು ಕಪ್ಪು ಬಣ್ಣದ ಪಾಸ್‌ಪೋರ್ಟ್ ಬಳಸುತ್ತವೆ.
ಬಣ್ಣಗಳಿಂದ ಭದ್ರತೆ ಸುಲಭ
ಪಾಸ್‌ಪೋರ್ಟ್ ನ ಮೇಲ್ಪದರವನ್ನು ನೋಡಿದ ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಪ್ರಯಾಣಿಕರು ಸಾಮಾನ್ಯ ನಾಗರಿಕರೇ ಅಥವಾ ವಿವಿಐಪಿಗಳೇ (VVIP) ಎಂಬುದು ತಿಳಿಯುತ್ತದೆ. ಇದರಿಂದ ಭದ್ರತಾ ತಪಾಸಣೆ ಮತ್ತು ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ವೇಗವಾಗಿ ನಡೆಯಲು ಸಹಕಾರಿಯಾಗುತ್ತದೆ.







