ಪನ್ನಾ : ಅಚಾನಕ್ಕಾಗಿ ಸಿಕ್ಕ ವಜ್ರದಿಂದ ಬಡ ಮಹಿಳೆಯೊಬ್ಬಳ ಅದೃಷ್ಟವೇ ಬದಲಾಗಿದೆ. ಹೌದು, ಬೆಲೆಬಾಳುವ ಕಲ್ಲಿನ ಗಣಿಗಳಿಗೆ ಹೆಸರುವಾಸಿಯಾದ ಮಧ್ಯಪ್ರದೇಶದ ಪನ್ನಾ ಅರಣ್ಯ ಪ್ರದೇಶದಲ್ಲಿ ಉರುವಲು ಸಂಗ್ರಹಿಸಲು ಹೋದಾಗ ಮಹಿಳೆಯೊಬ್ಬರಿಗೆ 4.39 ಕ್ಯಾರೆಟ್ ವಜ್ರ ಸಿಕ್ಕಿದೆ. ಅಂದಾಜಿನ ಪ್ರಕಾರ, ಹರಾಜಿನಲ್ಲಿ ವಜ್ರಕ್ಕೆ 20 ಲಕ್ಷ ರೂಪಾಯಿ ಬೆಲೆ ಬಾಳಲಿದೆ.
ಪುರುಷೋತ್ತಮಪುರದ ನಿವಾಸಿಯಾದ ಗೆಂಡಾ ಬಾಯಿ ಅನ್ನೋ ಮಹಿಳೆ ಬುಧವಾರ ಕಟ್ಟಿಗೆ ಸಂಗ್ರಹಿಸೋಕೆ ಅಂತಾ ಕಾಡಿಗೆ ಹೋಗಿದ್ದಾಳೆ. ಆಗ ಬುಧವಾರ ಬೆಲೆಬಾಳುವ ಕಲ್ಲು ಸಿಕ್ಕಿತು ಎಂದು ಡೈಮಂಡ್ ಇನ್ಸ್ಪೆಕ್ಟರ್ ಅನುಪಮ್ ಸಿಂಗ್ ತಿಳಿಸಿದ್ದಾರೆ. ನಂತ್ರ ಆ ಮಹಿಳೆ ಡೈಮಂಡ್ ಆಫೀಸ್ ಹೋಗಿದ್ದು, 4.39 ಕ್ಯಾರೆಟ್ ವಜ್ರದ ಕಲ್ಲನ್ನ ಠೇವಣಿ ಇಟ್ಟಿದ್ದಾಳೆ ಎಂದು ಹೇಳಿದರು. ಇನ್ನು ಈ ಕಚ್ಚಾ ವಜ್ರವನ್ನ ಹರಾಜು ಹಾಕಲಾಗುವುದು ಮತ್ತು ಸರ್ಕಾರದ ರಾಯಲ್ಟಿ ಮತ್ತು ತೆರಿಗೆಗಳನ್ನ ಕಡಿತಗೊಳಿಸಿದ ನಂತ್ರ ಆದಾಯವನ್ನ ಮಹಿಳೆಗೆ ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗೆಂಡಾ ಬಾಯಿ, ತಾನು ಕಾಡಿನಿಂದ ಕಟ್ಟಿಗೆ ಸಂಗ್ರಹಿಸಿ ನಂತ್ರ ಅದನ್ನ ಮಾರಾಟ ಮಾಡುತ್ತೇನೆ. ಮನೆಯನ್ನ ನಡೆಸಲು ಕಾರ್ಮಿಕ ಕೆಲಸವನ್ನ ಸಹ ಮಾಡುತ್ತಿದ್ದೇನೆ ಎಂದು ಹೇಳಿದರು. ತನಗೆ ನಾಲ್ಕು ಗಂಡುಮಕ್ಕಳು ಮತ್ತು ಇಬ್ಬರು ಪುತ್ರಿಯರಿದ್ದು, ಅವರು ಮದುವೆಯ ವಯಸ್ಸಿನವರಾಗಿದ್ದಾರೆ ಎಂದರು. ಹರಾಜಿನಿಂದ ಪಡೆದ ಹಣವನ್ನ ಅವರ ಮನೆ ನಿರ್ಮಾಣ ಮತ್ತು ಅವರ ಹೆಣ್ಣುಮಕ್ಕಳ ಮದುವೆಗೆ ಬಳಸಲಾಗುವುದು ಎಂದು ಹೇಳಿದರು. ಮಧ್ಯಪ್ರದೇಶದ ಬಡ ಬುಂದೇಲ್ ಖಂಡ್ ಪ್ರದೇಶದಲ್ಲಿರುವ ಪನ್ನಾ ಜಿಲ್ಲೆಯು ವಜ್ರದ ಗಣಿಗಳಿಗೆ ಹೆಸರುವಾಸಿಯಾಗಿದೆ.