ನವದೆಹಲಿ: ಆನ್‌ಲೈನ್ ವಂಚನೆಗಳನ್ನು ತಡೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಸಿಮ್ ಬೈಂಡಿಂಗ್’ (SIM Binding) ನಿಯಮವನ್ನು ಅಳವಡಿಸಿಕೊಳ್ಳಲು ತನಗೆ ಕನಿಷ್ಠ 4 ರಿಂದ 6 ತಿಂಗಳ ಹೆಚ್ಚಿನ ಕಾಲಾವಕಾಶ ಬೇಕೆಂದು ವಾಟ್ಸಾಪ್ ಸಂಸ್ಥೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ತರಾತುರಿಯಲ್ಲಿ ಈ ನಿಯಮ ಜಾರಿಗೆ ತಂದರೆ ಕೋಟ್ಯಂತರ ಬಳಕೆದಾರರ ಸೇವೆಯಲ್ಲಿ ವ್ಯತ್ಯಯವಾಗಬಹುದು ಎಂದು ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಸೈಬರ್ ಅಪರಾಧಗಳನ್ನು ತಡೆಯಲು ಕೇಂದ್ರ ಸರ್ಕಾರವು ಟೆಲಿಕಾಂ ಮತ್ತು ಮೆಸೇಜಿಂಗ್ ಆ್ಯಪ್‌ಗಳಿಗೆ ಹೊಸ ಸೂಚನೆ ನೀಡಿದೆ. ಇದರ ಪ್ರಕಾರ, ವಾಟ್ಸಾಪ್ ಖಾತೆಯು ಆ ಫೋನ್‌ನಲ್ಲಿರುವ ಸಕ್ರಿಯ ಸಿಮ್ ಕಾರ್ಡ್‌ಗೆ ಡಿಜಿಟಲ್ ಆಗಿ ಲಿಂಕ್ ಆಗಿರಬೇಕು. ಇದರಿಂದ ಬೇರೆ ಯಾರೋ ನಿಮ್ಮ ಸಂಖ್ಯೆಯನ್ನು ಬಳಸಿ ಮತ್ತೊಂದು ಸಾಧನದಲ್ಲಿ ವಾಟ್ಸಾಪ್ ಲಾಗಿನ್ ಆಗುವುದನ್ನು ತಡೆಯಬಹುದು.
ವಾಟ್ಸಾಪ್ ಜಾಗತಿಕ ವೇದಿಕೆಯಾಗಿರುವುದರಿಂದ, ಭಾರತದ ವಿಶಿಷ್ಟ ನಿಯಮಗಳಿಗೆ ತಕ್ಕಂತೆ ತನ್ನ ಸಾಫ್ಟ್‌ವೇರ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲು ಸಮಯದ ಅಗತ್ಯವಿದೆ.
ತಕ್ಷಣವೇ ಈ ನಿಯಮ ಜಾರಿಗೊಳಿಸಿದರೆ, ಹಳೆಯ ಫೋನ್ ಬಳಸುವವರು ಅಥವಾ ಸಿಮ್ ಬದಲಾಯಿಸುವ ಗ್ರಾಹಕರು ಲಾಗಿನ್ ಸಮಸ್ಯೆಯನ್ನು ಎದುರಿಸಬಹುದು. ಇದನ್ನು ತಪ್ಪಿಸಲು ‘ಸ್ಮೂತ್ ಟ್ರಾನ್ಸಿಶನ್’ (ಸುಗಮ ಬದಲಾವಣೆ) ಅಗತ್ಯ ಎಂದು ಸಂಸ್ಥೆ ಹೇಳಿದೆ.
ಭಾರತದಲ್ಲಿ ಸುಮಾರು 50 ಕೋಟಿಗೂ ಹೆಚ್ಚು ವಾಟ್ಸಾಪ್ ಬಳಕೆದಾರರಿದ್ದು, ಎಲ್ಲರಿಗೂ ಈ ಹೊಸ ವ್ಯವಸ್ಥೆಯನ್ನು ಅಳವಡಿಸುವುದು ದೊಡ್ಡ ಸವಾಲಾಗಿದೆ.








