ಭಿಂದ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ ವೈರಲ್ ವಿಡಿಯೋವನ್ನು ಭಿಂದ್ ಜಿಲ್ಲೆಯ ಲಹಾರ್ ಸರ್ಕಾರಿ ಕಾಲೇಜಿನಲ್ಲಿ ರೆಕಾರ್ಡ್ ಮಾಡಲಾಗಿದೆ. ಜಿವಾಜಿ ವಿಶ್ವವಿದ್ಯಾಲಯದ ಬಿಎ ಮತ್ತು ಬಿಎಸ್ಸಿ ಕೋರ್ಸ್ಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡಿದ್ದಾರೆ ಎನ್ನಲಾಗುತ್ತಿದೆ.
#MadhyaPradesh: Students are spotted copying in their college exam by keeping reference books and mobile phones along with them in #Bhind district. pic.twitter.com/oKMSf7rlEp
— Free Press Journal (@fpjindia) July 28, 2022
ವಿಡಿಯೋದಲ್ಲಿ ವಿದ್ಯಾರ್ಥಿಗಳು ತಮ್ಮೊಂದಿಗೆ ಉಲ್ಲೇಖ ಪುಸ್ತಕಗಳು, ಚೀಟ್ಸ್ ಮತ್ತು ಮೊಬೈಲ್ ಫೋನ್ಗಳನ್ನು ಇಟ್ಟುಕೊಂಡು ನಕಲು ಮಾಡುತ್ತಿರುವುದು ಕಂಡುಬಂದಿದೆ. ಪರೀಕ್ಷಾ ಸಭಾಂಗಣದಲ್ಲಿ ಶಿಕ್ಷಕರ ಸಮ್ಮುಖದಲ್ಲೇ ನಕಲು ಮಾಡುವ ಕೃತ್ಯ ನಡೆಯುತ್ತಿತ್ತು ಎನ್ನಲಾಗಿದೆ.
ಈ ಕುರಿತಂತೆ ಕಾಲೇಜಿನ ಪ್ರಾಂಶುಪಾಲ ಕಮಲೇಶ್ ಪ್ರತಿಕ್ರಿಯಿಸಿದ್ದು, ನಾನು ಸದ್ಯಕ್ಕೆ ಹೊರಗಿದ್ದೇನೆ. ವೈರಲ್ ಆದ ವಿಡಿಯೋದ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ನಾನು ಈ ಬಗ್ಗೆ ತನಿಖೆ ನಡೆಸುತ್ತೇನೆ ಎಂದೇಳಿದ್ದಾರೆ.
ಮತ್ತೊಂದೆಡೆ, ಜಿವಾಜಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಸುಶೀಲ್ ಮಂಡೇಲಿಯಾ ಮಾತನಾಡಿದ್ದು, ಈ ವಿಷಯದ ಬಗ್ಗೆ ನನಗೆ ತಿಳಿದಿಲ್ಲ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಘಟನೆಗಳು ವರದಿಯಾಗಿದ್ದವು ಎನ್ನಲಾಗುತ್ತಿದೆ.