ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಸೋಮವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ 9,000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದಾರೆ.
ಈ ಪಂದ್ಯಕ್ಕೂ ಮೊದಲು 9,000 ರನ್ ಪೂರೈಸಲು ಕೊಹ್ಲಿಗೆ ಕೇವಲ 11 ರನ್‌ಗಳ ಅಗತ್ಯವಿತ್ತು. ಅಕ್ಸರ್ ಪಟೇಲ್ ಎಸೆದ ಪಂದ್ಯದ 6ನೇ ಓವರ್‌ನಲ್ಲಿ ಸಿಂಗಲ್ ರನ್ ಪಡೆಯುವ ಮೂಲಕ ಕೊಹ್ಲಿ ಈ ಸ್ಮರಣೀಯ ಸಾಧನೆ ಮಾಡಿದರು.
ಐಪಿಎಲ್ ಆರಂಭವಾದ 2008 ರಿಂದಲೂ ಆರ್‌ಸಿಬಿ ತಂಡದ ಪರವಾಗಿ ಆಡುತ್ತಿರುವ ಕೊಹ್ಲಿ, ಒಂದೇ ಫ್ರಾಂಚೈಸಿ ಪರವಾಗಿ ಇಷ್ಟು ದೊಡ್ಡ ಮೊತ್ತದ ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಡೆಲ್ಲಿ ನೀಡಿದ 76 ರನ್‌ಗಳ ಅಲ್ಪ ಗುರಿಯನ್ನು ಬೆನ್ನಟ್ಟಿದ ಕೊಹ್ಲಿ, 15 ಎಸೆತಗಳಲ್ಲಿ ಅಜೇಯ 23 ರನ್ (2 ಸಿಕ್ಸರ್, 1 ಬೌಂಡರಿ) ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.








