ವಿಜಯಪುರ : ಕಳೆದ ವರ್ಷದಿಂದ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿತ್ತು. ಇದರಿಂದ ಇಡೀ ರಾಜ್ಯದ ಜನರು ಬರಗಾಲಕ್ಕೆ ತತ್ತರಿಸಿ ಹೋಗಿದ್ದರು. ಇದೀಗ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೇ ರೈತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ರುಕ್ಮವ್ವ ದುಂಡಪ್ಪ ಬಾಡಿಗಿ ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ ಎಂದು ತಿಳಿದುಬಂದಿದೆ.
ಹೌದು ಕಳೆದ ವರ್ಷದಿಂದ ರಾಜ್ಯವು ಮಳೆ ಬಾರದೇ ತೀವ್ರ ಬರಗಾಲ ಎದುರಿಸಿತ್ತು. ರೈತರು ಬೆಳೆಗಳಿಗೆ ನೀರಿಲ್ಲದೆ ಸಾಕಷ್ಟು ಕಷ್ಟ ಅನುಭವಿಸಿದ್ದರು. ಇದೀಗ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೇ ರೈತ ಮಹಿಳೆ ರುಕ್ಮವ್ವ ದುಂಡಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರುಕ್ಮಿವ್ವ ದುಂಡಪ್ಪ ಅವರು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ಜಮೀನು ಹೊಂದಿದ್ದರು.ಹಾಗಾಗಿ ಅದೇ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕಿನಲ್ಲಿ 1 ಲಕ್ಷ, ವಿಜಯಪುರ ಎಚ್ಡಿಎಫ್ಸಿ ಬ್ಯಾಂಕಿನಲ್ಲಿ 2.5 ಲಕ್ಷ, ಬಬಲೇಶ್ವರದ ಚೈತನ್ಯ ಪೈನಾನ್ಸ್ನಲ್ಲಿ 50 ಸಾವಿರ ಹಾಗೂ ಖಾಸಗಿಯಾಗಿ 6 ಲಕ್ಷ ಸಾಲ ಸೇರಿ 10 ಲಕ್ಷ ಸಾಲ ಮಾಡಿಕೊಂಡಿದ್ದರು.
ಇದೀಗ ಸಕಾಲಕ್ಕೆ ಮಳೆ ಬಾರದೇ ಇದ್ದಿದ್ದರಿಂದ ಇತ್ತ ಕಡೆ ಮಳೆಯೂ ಇಲ್ಲ ಅತ್ತಕಡೆ ಬೆಳೆಯು ಇಲ್ಲದಂತಾಗಿ, ಸಾಲ ತೀರಿಸಲು ಒದ್ದಾಡಿದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.