ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ದಲಿತ ಸಂಘಟನೆ ಮತ್ತು ಪ್ರಮುಖ ರಾಜಕೀಯ ಪಕ್ಷವಾದ ವಿಡುತಲೈ ಚಿರುತ್ತೈಗಲ್ ಕಚ್ಚಿ (VCK) ಇಂದು ಅಧಿಕೃತ ಬೆಂಬಲ ಘೋಷಿಸುವ ಸಾಧ್ಯತೆಯಿದೆ. ಇದು ರಾಜ್ಯ ರಾಜಕೀಯದಲ್ಲಿ ಹೊಸ ಮೈತ್ರಿಯ ಮುನ್ಸೂಚನೆಯನ್ನು ನೀಡಿದೆ.
ಬಹುಮತ ಸಾಬೀತುಪಡಿಸಲು ಮತ್ತು ರಾಜ್ಯಪಾಲರ ಮುಂದೆ ಬಲ ಪ್ರದರ್ಶಿಸಲು ಹೆಣಗಾಡುತ್ತಿರುವ ವಿಜಯ್ ಅವರಿಗೆ ತೋಲ್ ತಿರುಮಾವಳವನ್ ನೇತೃತ್ವದ ವಿಸಿಕೆ ಬೆಂಬಲ ನೀಡಿದರೆ, ಅದು ಟಿವಿಪಿ (TVK) ಪಕ್ಷಕ್ಕೆ ದೊಡ್ಡ ಆನೆಯ ಬಲ ಬಂದಂತಾಗಲಿದೆ.
ವಿಸಿಕೆ ಪಕ್ಷದ ಹಿರಿಯ ನಾಯಕರು ಇಂದು ಸಭೆ ನಡೆಸಲಿದ್ದು, ಸಂಜೆಯ ವೇಳೆಗೆ ತಮ್ಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ರಾಜಕೀಯ ಲೆಕ್ಕಾಚಾರ: ಈವರೆಗೆ ಡಿಎಂಕೆ (DMK) ಮೈತ್ರಿಕೂಟದಲ್ಲಿದ್ದ ವಿಸಿಕೆ, ಈಗ ವಿಜಯ್ ಪರ ನಿಲ್ಲಲು ನಿರ್ಧರಿಸಿರುವುದು ತಮಿಳುನಾಡು ರಾಜಕೀಯದ ಸಮೀಕರಣಗಳನ್ನೇ ಬದಲಿಸಬಲ್ಲದು.
ವಿಸಿಕೆ ತಮಿಳುನಾಡಿನ ಪ್ರಬಲ ದಲಿತ ಪರ ಪಕ್ಷವಾಗಿದ್ದು, ರಾಜ್ಯದ ಉತ್ತರ ಮತ್ತು ಕೇಂದ್ರ ಭಾಗಗಳಲ್ಲಿ ಗಮನಾರ್ಹ ಮತಬ್ಯಾಂಕ್ ಹೊಂದಿದೆ. ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತುವ ಈ ಪಕ್ಷವು ವಿಜಯ್ ಅವರ ‘ಸಮಾನತೆ’ಯ ಸಿದ್ಧಾಂತಕ್ಕೆ ಪೂರಕವಾಗಿ ನಿಲ್ಲುವ ಸಾಧ್ಯತೆ ಹೆಚ್ಚಿದೆ.








