ಅಮೆರಿಕದ ವೈಟ್ ಹೌಸ್ ಸಮೀಪ ನಡೆದ ಗುಂಡಿನ ಚಕಮಕಿಯಲ್ಲಿ ಸಶಸ್ತ್ರ ವ್ಯಕ್ತಿಯೊಬ್ಬನ ಮೇಲೆ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ (ಸ್ಥಳೀಯ ಕಾಲಮಾನ) ತಿಳಿಸಿದ್ದಾರೆ. ತುರ್ತು ಸೇವಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವ ಕಾರಣ, ಸಾರ್ವಜನಿಕರು ಆ ಪ್ರದೇಶಕ್ಕೆ ಬರದಂತೆ ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ‘ಎಕ್ಸ್’ (X)ನಲ್ಲಿ ಮಾಹಿತಿ ನೀಡಿರುವ ಸೀಕ್ರೆಟ್ ಸರ್ವಿಸ್‌ನ ಸಂವಹನ ವಿಭಾಗವು, “ವಾಷಿಂಗ್ಟನ್ ಡಿಸಿಯ 15ನೇ ಸ್ಟ್ರೀಟ್ ಮತ್ತು ಇಂಡಿಪೆಂಡೆನ್ಸ್ ಅವೆನ್ಯೂನಲ್ಲಿ ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ನಮ್ಮ ಸಿಬ್ಬಂದಿ ಇದ್ದಾರೆ. ಕಾನೂನು ಜಾರಿ ಅಧಿಕಾರಿಗಳು ಒಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದು, ಆತನ ಸ್ಥಿತಿ ಸದ್ಯಕ್ಕೆ ತಿಳಿದುಬಂದಿಲ್ಲ. ತುರ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದರಿಂದ ದಯವಿಟ್ಟು ಈ ಪ್ರದೇಶವನ್ನು ತಪ್ಪಿಸಿ,” ಎಂದು ತಿಳಿಸಿದೆ.
ವೈಟ್ ಹೌಸ್‌ನಿಂದ ಅರ್ಧ ಮೈಲಿಗಿಂತಲೂ ಕಡಿಮೆ ದೂರದಲ್ಲಿರುವ ವಾಷಿಂಗ್ಟನ್ ಸ್ಮಾರಕದ ಬಳಿ ಈ ಸಂಘರ್ಷ ನಡೆದಿದೆ. ಶಂಕಿತ ವ್ಯಕ್ತಿ ಗನ್ ಹೊರತೆಗೆದಾಗ ಸೀಕ್ರೆಟ್ ಸರ್ವಿಸ್‌ನ ಯುನಿಫಾರ್ಮ್ಡ್ ಡಿವಿಷನ್ ಅಧಿಕಾರಿಗಳು ಆತನನ್ನು ಎದುರಿಸಿದ್ದಾರೆ.
ಈ ಘಟನೆಯಲ್ಲಿ ಹಾದಿಹೋಕ ಮಗುವೊಂದಕ್ಕೂ ಗಾಯಗಳಾಗಿವೆ ಎಂದು ಡೆಪ್ಯುಟಿ ಡೈರೆಕ್ಟರ್ ಮ್ಯಾಟ್ ಕ್ವಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. “ಶಂಕಿತ ವ್ಯಕ್ತಿಯ ಬಳಿ ಶಸ್ತ್ರಾಸ್ತ್ರ ಇರುವುದನ್ನು ನಮ್ಮ ತರಬೇತಿ ಪಡೆದ ಕಣ್ಗಾವಲು ಸಿಬ್ಬಂದಿ ಗುರುತಿಸಿದರು. ಅಧಿಕಾರಿಗಳು ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಆತ ಓಡಲು ಯತ್ನಿಸಿ, ಗನ್ ತೆಗೆದು ಅಧಿಕಾರಿಗಳ ದಿಕ್ಕಿನಲ್ಲಿ ಗುಂಡು ಹಾರಿಸಿದನು. ಪ್ರತಿಯಾಗಿ ಅಧಿಕಾರಿಗಳೂ ಗುಂಡಿನ ದಾಳಿ ನಡೆಸಿದರು,” ಎಂದು ಕ್ವಿನ್ ವಿವರಿಸಿದ್ದಾರೆ.








