ವಾಷಿಂಗ್ಟನ್: ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರೊಂದಿಗಿನ ಮಹತ್ವದ ಶೃಂಗಸಭೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತಷ್ಟು ಕಠಿಣ ನಿಲುವು ತಳೆದ್ದಾರೆ. ಸಂಘರ್ಷ ತಣಿಸಲು ಇರಾನ್ ಕಳುಹಿಸಿದ್ದ ಕದನ ವಿರಾಮದ (Ceasefire) ಪ್ರಸ್ತಾವನೆಯನ್ನು ಟ್ರಂಪ್ ಸಾರಾಸಗಟಾಗಿ ತಳ್ಳಿಹಾಕಿದ್ದು, ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿ ಹೆಚ್ಚಾಗುವಂತೆ ಮಾಡಿದ್ದಾರೆ.
ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಚಟುವಟಿಕೆಗಳ ಕುರಿತು ಶಾಂತಿ ಮಾತುಕತೆಗೆ ಮುಂದಾಗಿತ್ತು. ಆದರೆ, “ಇರಾನ್ ತನ್ನ ನಡವಳಿಕೆಯನ್ನು ಸಂಪೂರ್ಣವಾಗಿ ಬದಲಾಯಿಸದ ಹೊರತು ಯಾವುದೇ ಒಪ್ಪಂದವಿಲ್ಲ” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಮೇ 13 ರಿಂದ ಟ್ರಂಪ್ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯಲ್ಲಿ ಇರಾನ್ ವಿಚಾರವೇ ಪ್ರಮುಖ ಚರ್ಚೆಯಾಗಲಿದ್ದು, ಅದಕ್ಕೂ ಮುನ್ನವೇ ಇರಾನ್ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ಟ್ರಂಪ್ ತಾವು ಯಾರಿಗೂ ಬಗ್ಗುವುದಿಲ್ಲ ಎಂಬ ಸಂದೇಶವನ್ನು ಬೀಜಿಂಗ್‌ಗೆ ರವಾನಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ನೌಕಾಪಡೆಗಳು ಈಗಾಗಲೇ ಸನ್ನದ್ಧ ಸ್ಥಿತಿಯಲ್ಲಿದ್ದು, ಟ್ರಂಪ್ ಅವರ ಈ ಇತ್ತೀಚಿನ ನಡೆಯು ಗಲ್ಫ್ ರಾಷ್ಟ್ರಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.








