ನವದೆಹಲಿ: ಭಾರತದ ಅನುಭವಿ ರಾಜತಾಂತ್ರಿಕ ಮತ್ತು ಅಮೆರಿಕದ ಮಾಜಿ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ (LG) ಆಗಿ ನೇಮಕಗೊಂಡಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರ್ಷ ವ್ಯಕ್ತಪಡಿಸಿದ್ದಾರೆ. ಸಂಧು ಅವರನ್ನು “ಅತ್ಯಂತ ಸಮರ್ಥ ರಾಜತಾಂತ್ರಿಕ” ಎಂದು ಬಣ್ಣಿಸಿರುವ ಟ್ರಂಪ್, ಭಾರತ-ಅಮೆರಿಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಅವರ ಪಾತ್ರ ದೊಡ್ಡದಿದೆ ಎಂದು ಸ್ತುತಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ಸಲ್ಲಿಸಿರುವ ಟ್ರಂಪ್, “ದೆಹಲಿಯ ನೂತನ ಎಲ್‌ಜಿಯಾಗಿ ನೇಮಕಗೊಂಡ ತರಂಜಿತ್ ಸಂಧು ಅವರಿಗೆ ಅಭಿನಂದನೆಗಳು. ಅಮೆರಿಕದ ರಾಯಭಾರಿಯಾಗಿ ಅವರು ಕೆಲಸ ಮಾಡಿದ ಅವಧಿಯಲ್ಲಿ ಉಭಯ ದೇಶಗಳ ಬಾಂಧವ್ಯ ಸುಧಾರಿಸಲು ಅವರು ತೋರಿದ ಬದ್ಧತೆ ಶ್ಲಾಘನೀಯ,” ಎಂದು ಹೇಳಿದ್ದಾರೆ.
ದೆಹಲಿಯ ಅಭಿವೃದ್ಧಿ ಮತ್ತು ಭಾರತದ ಜಾಗತಿಕ ಸಂಬಂಧಗಳನ್ನು ಮುನ್ನಡೆಸುವಲ್ಲಿ ಸಂಧು ಯಶಸ್ವಿಯಾಗಲಿ ಎಂದು ಟ್ರಂಪ್ ಆಶಿಸಿದ್ದಾರೆ.
ಅನುಭವಿ ಸಾರಥಿ: 1988ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ತರಂಜಿತ್ ಸಂಧು, 2020 ರಿಂದ 2024ರವರೆಗೆ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ ಆಡಳಿತದ ನಡುವೆ ಅವರು ಉತ್ತಮ ಕೊಂಡಿಯಾಗಿ ಕೆಲಸ ಮಾಡಿದ್ದರು.








