ಬೆಂಗಳೂರು: ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ರಾಜಸ್ವ ತರುವ ಅಬಕಾರಿ ಇಲಾಖೆಯಲ್ಲಿ ( Excise department ) ಕೇಳಿದ್ದಷ್ಟೂ ಹಣ ಕೊಟ್ಟರೆ ಬೇಕಾದ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಜತೆಗೆ, ಬೇಡಿಕೆ ಇರುವ ಸ್ಥಳಗಳ ನಿಯುಕ್ತಿಗಾಗಿ ಇನ್ನಷ್ಟು ಕುದುರಿಸಿ ಹಣ ಪಡೆದು ವರ್ಗಾಯಿಸಲಾಗುತ್ತಿದೆ. ಹಣ ನೀಡದಿರುವರಿಗೆ ಡಿಸ್ಟಿಲರಿ, ಬ್ರಿವರಿ ವೈನರಿ ಹಾಗೂ ಮೈಕ್ರೋಬ್ರಿವರಿಯಲ್ಲಿರುವ ಹುದ್ದೆ ತೋರಿಸಲಾಗುತ್ತಿದೆ.
ಲೋಕಸಭೆ ಚುನಾವಣೆಗೆ ( Lok Sabha Election ) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ವೃಂದದ ಅಧಿಕಾರಿಗಳನ್ನು ತರಾತುರಿ ವರ್ಗಾವಣೆಗೆ ಅಬಕಾರಿ ಸಚಿವರು ಕೈ ಹಾಕಿದ್ದಾರೆ. ಪ್ರತಿ ವರ್ಷ ಮೇ ಅಥವಾ ಜೂನ್‌ನಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆಯತ್ತದೆ. ಆದರೆ,ಅಬಕಾರಿ ಇಲಾಖೆಯಲ್ಲಿ ವರ್ಷಕ್ಕೆ ಎರಡೆರಡು ಬಾರಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಳು ನಡೆದಿರುವುದುಂಟು.ಆಡಳಿತಾತ್ಮಕವಾಗಿ ಅಗತ್ಯವಿರುವ ಖಾಲಿ ಸ್ಥಾನಗಳಿಗೆ ವರ್ಗಾವಣೆ ಮಾಡಬಾರದು ಎಂದು ಸರ್ಕಾರದ ನಿಯಮವಿದೆ. ಆದರೂ ಈ ನಿಯಮವನ್ನು ಉಲ್ಲಂಸಿ ಇಲಾಖೆಯಲ್ಲಿ ಗ್ರೂಪ್ ‘ಬಿ’ ಮತ್ತು ‘ಸಿ’ವೃಂದದ ಅಧಿಕಾರಿಗಳನ್ನು ಖಾಲಿ ಸ್ಥಾನಕ್ಕೆ ವರ್ಗಾಯಿಸಲಾಗುತ್ತಿದೆ.
ಹಿರಿತನ ಆಧಾರದಲ್ಲಿ ಮುಂಬಡ್ತಿ ಪಡೆದಿರುವ ಅಧಿಕಾರಿಗಳನ್ನು ಕಡೆಗಣಿಸಿ, ಅರ್ಹತೆ ಇಲ್ಲದ ಕಿರಿಯ ಅಧಿಕಾರಿಗಳಿಂದ ಹೆಚ್ಚು ಕಮಿಷನ್ ಪಡೆದು ಕೊಪ್ಪಳ, ರಾಯಚೂರು ಹಾಗೂ ಬೀದರ್ ಅಬಕಾರಿ ಉಪ ಆಯುಕ್ತ ಹುದ್ದೆಗೆ ಪ್ರಭಾರದಲ್ಲಿ ತಂದು ಕೂರಿಸಲಾಗುತ್ತಿದೆ. ಭ್ರಷ್ಟಾಚಾರ, ಲಂಚ ಬೇಡಿಕೆ ಸಂಬಂಧ ಟ್ರ್ಯಾಪ್‌ಗೆ ಒಳಗಾದ ಅಧಿಕಾರಿಗಳಿಗೆ ಲಾಭದಾಯಕ ಹುದ್ದೆ ನೀಡಬಾರದೆಂದು ಸರ್ಕಾರದ ಆದೇಶವಿದೆ. ಆದರೂ ಈ ನಿಯಮವನ್ನು ಉಲ್ಲಂಸಿ ಕೆಲವರಿಂದ ಕೋಟ್ಯಂತರ ರೂ.ಲಂಚ ಪಡೆದು ಲಾಭದಾಯಕ ಹುದ್ದೆ ಕೊಟ್ಟಿದ್ದಾರೆ. ಅಬಕಾರಿ ಉಪ ಆಯುಕ್ತರಾದ ಆರ್.ನಾಗಶಯನಗೆ ಚಾಮರಾಜನಗರ ಹಾಗೂ ಸಿ.ಸೆಲೀನಾಗೆ ಚಿಕ್ಕಮಗಳೂರು ಅಬಕಾರಿ ಉಪಆಯುಕ್ತ ಹುದ್ದೆ ನೀಡಲಾಗಿದೆ.
ವರ್ಗಾ ಪ್ರಕ್ರಿಯೆ ಮತ್ತೆ ಶುರು
ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ಬಲ ಶೇ.6 ಮೀರದಂತೆ ಗ್ರೂಪ್ ‘ಎ’, ‘ಬಿ’, ‘ಸಿ’ ಹಾಗೂ ‘ಡಿ’ ವರ್ಗದ ಅಧಿಕಾರಿ, ನೌಕರರನ್ನು ವರ್ಗಾವಣೆಗೆ ಆಯಾ ಇಲಾಖೆಗಳ ಸಚಿವರಿಗೆ, ಸರ್ಕಾರ ಅಧಿಕಾರ ಕೊಟ್ಟಿತ್ತು. ಅಲ್ಲದೆ, ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿತ್ತು. ಈ ಸಂದರ್ಭದಲ್ಲಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಿಧ ವೃಂದದ ಒಟ್ಟು 400 ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾಯಿಸಲಾಗಿತ್ತು. ಇದರಲ್ಲಿ ಅಂದಾಜು 200 ಅಧಿಕಾರಿಗಳು ಪ್ರಿ ಮಚ್ಯೂರ್( ಅವಧಿ ಪೂರ್ವ ಮುನ್ನ) ಕಾರಣ ಕೊಟ್ಟು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದೀಗ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಅವಧಿ ಮುಗಿದು ಐದಾರು ತಿಂಗಳು ಕಳೆಯುವಷ್ಟರಲ್ಲೇ ಇಲಾಖೆಯಲ್ಲಿ ಮತ್ತೆ ವರ್ಗಾವಣೆ ಪ್ರಕ್ರಿಯೆ ದಂಧೆ ಶುರುವಾಗಿದೆ. ವಿಧಾನಸೌಧದಲ್ಲಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕಚೇರಿಯಲ್ಲೇ ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ. ಸಚಿವರ ಪುತ್ರ, ಆಪ್ತ ಕಾರ್ಯದರ್ಶಿ ಹಾಗೂ ಆಪ್ತ ಸಹಾಯಕರು ತರೆಮರೆಯಲ್ಲಿ ಇದ್ದುಕೊಂಡು ಅಧಿಕಾರಿಗಳ ವರ್ಗಾವಣೆಗೆ ದಂಧೆಗೆ ಇಳಿದಿದ್ದಾರೆ. ಇದಕ್ಕೆ ಬೆಂಗಳೂರಿನಲ್ಲಿ ಅಬಕಾರಿ ಉಪ ಆಯುಕ್ತರ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಬಸವರಾಜ ಸಂಧಿವಾಡ ಎಂಬಾತ ಸೇರಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಗವರ್ನರ್‌ಗೆ ಕೊಟ್ಟಿರುವ ದೂರಿನಲ್ಲಿ ಅಧಿಕಾರಿಗಳ ಹೆಸರು ಸಮೇತ ನಮೂದಿಸಲಾಗಿದೆ.
ರೋಸಿ ಹೋಗಿರುವ ಅಧಿಕಾರಿಗಳು
ಗ್ರೂಪ್ ‘ ಎ’ ಅಡಿ ಬರುವ ಅಬಕಾರಿ ಉಪ ಆಯುಕ್ತರು ಒಂದು ಸ್ಥಳಕ್ಕೆ ವರ್ಗಾವಣೆಗೊಂಡರೆ ಅದೇ ಸ್ಥಳದಲ್ಲಿ 2 ವರ್ಷ ಕಾಲ ಕಾರ್ಯನಿರ್ವಹಿಸಬಹುದು. ಹೀಗಿದ್ದರೂ, ಕೆಲವರನ್ನು ಅವಧಿ ಪೂರ್ವ ಮುನ್ನವೇ ಅಬಕಾರಿ ಉಪ ಆಯುಕ್ತರನ್ನು ಏಕಾಏಕಿ ಎತ್ತಂಗಡಿ ಮಾಡಲಾಗಿತ್ತು. ಗ್ರೂಪ್ ‘ಸಿ’ಅಡಿ ಬರುವ ಅಬಕಾರಿ ನಿರೀಕ್ಷರು, ಬೇರೆ ಕಡೆ ವರ್ಗಾವಣೆ ಆದರೆ ಸರ್ಕಾರದ ನಿಯಮದಂತೆ ನಾಲ್ಕು ವರ್ಷ ಕಾಲ ಕಾರ್ಯನಿರ್ವಹಿಸಲು ಅವಕಾಶವಿದೆ. ಹಿಂದೆ ವರ್ಗಾವಣೆಗೊಂಡ ಈಗ 2-3 ವರ್ಷ ಕಳೆಯುತ್ತಿರುವಾಗಲೇ ಏಕಾಏಕಿ ಎಲ್ಲ ಅಬಕಾರಿ ನಿರೀಕ್ಷಕರನ್ನು ವರ್ಗಾವಣೆಗೆ ಇಲಾಖೆ ಸಚಿವರೇ ಮುಂದಾಗಿದ್ದಾರೆ. ಕೆಲವರು ವರ್ಗಾವಣೆಗೊಂಡು ವರ್ಷ ಕಳೆಯುವಷ್ಟರಲ್ಲೇ ಅವರನ್ನು ಎತ್ತಂಗಡಿ ಮಾಡಿ ಇನ್ನೊಬ್ಬರ ಅಧಿಕಾರಿ ತಂದು ಕೂರಿಸಲಾಗುತ್ತದೆ. ಈ ಬಗ್ಗೆ ಕೆಲವಂತು ರೋಸಿಹೋಗಿದ್ದಾರೆ.
ಯಾವ ಹುದ್ದೆ ವರ್ಗಾವಣೆಗೆ ಎಷ್ಟು ದರ.?
ಉಪ ಆಯುಕ್ತ – 2.5ರಿಂದ 3.5 ಕೋಟಿ
ಅಧೀಕ್ಷಕ- 25ರಿಂದ 30 ಲಕ್ಷ
ಉಪ ಅಧೀಕ್ಷಕ- 30ರಿಂದ 40 ಲಕ್ಷ
ಅಬಕಾರಿ ನಿರೀಕ್ಷಕ- 40ರಿಂದ 50 ಲಕ್ಷ
ಉಪ ನಿರೀಕ್ಷಕ- 15ರಿಂದ 20 ಲಕ್ಷ
ಅಬಕಾರಿ ಮುಖ್ಯ ಪೇದೆ- 8ರಿಂದ 10 ಲಕ್ಷ
ಅಬಕಾರಿ ಪೇದೆ- 5ರಿಂದ 8 ಲಕ್ಷ
ಗೂಗಲ್ ಸರ್ಚ್‌ನಿಂದ 5 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡು ವಂಚನೆಗೊಳಗಾದ ಮಹಿಳೆ | Online Scam
Shocking News: ಬೆಂಗಳೂರಲ್ಲಿ ಕುಡಿದ ಮತ್ತಿನಲ್ಲೇ ‘ಶಾಲಾ ವಾಹನ’ ಚಾಲನೆ: 16 ಚಾಲಕರ ವಿರುದ್ಧ ಕೇಸ್