ಕಾರವಾರ: ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಆಯೋಗಕ್ಕೆ ದೂರು ಬಂದಿದೆ. ಈ ದೂರುಗಳನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನಲೆಯಲ್ಲಿ ಇದುವರೆಗೆ 26 ಜನರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿರುವುದಾಗಿ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್.ಕೆ ತಿಳಿಸಿದರು.
ಅವರು ಶನಿವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿದಾರರು ಕೋರುವ ಮಾಹಿತಿಯನ್ನು ವಿವರವಾಗಿ ಪರಿಶೀಲಿಸಿ ಅಗತ್ಯ ಮಾಹಿತಿಯನ್ನು, ನಿಗಧಿತ ಶುಲ್ಕ ಪಡೆದು ಕಾಲಮಿತಿಯಲ್ಲಿ ನೀಡಬೇಕು. ಈ ಕಾಯಿದೆಯ ದುರ್ಬಳಕೆ ಕುರಿತು ಕೂಡಾ ಆಯೋಗಕ್ಕೆ ದೂರುಗಳು ಬಂದಿದ್ದು, ಆಯೋಗವು ಇದುವರೆಗೆ 26 ಜನರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆಯೋಗದಲ್ಲಿ 55400 ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಬಾಕಿ ಇತ್ತು, ನಂತರ ಈ ವರ್ಷ ಸಲ್ಲಿಕೆಯಾದ ಮೇಲ್ಮನವಿಗಳು ಸೇರಿ ಬಹುತೇಕ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿ 28731 ಮೇಲ್ಮನವಿಗಳು ವಿಚಾರಣೆಗೆ ಬಾಕಿ ಇವೆ. ಉತ್ತರ ಕನ್ನಡ ಜಿಲ್ಲೆಯ 524 ಅರ್ಜಿಗಳು ಬಾಕಿ ಇದ್ದು ಜಿಲ್ಲೆಯು ರಾಜ್ಯದಲ್ಲಿ 17 ನೇ ಸ್ಥಾನದಲ್ಲಿದ್ದು, ಈ ಪೈಕಿ 164 ಅರ್ಜಿಗಳು ಆರ್.ಡಿ.ಪಿ.ಆರ್ ಮತ್ತು 110 ಅರ್ಜಿಗಳು ಕಂದಾಯ ಇಲಾಖೆಗೆ ಸೇರಿದ್ದು, ಉಳಿದದ್ದು ಇತರೆ ಇಲಾಖೆಗಳಿಗೆ ಸಂಬದ್ಧಪಟ್ಟದ್ದಾಗಿದೆ ಎಂದರು.
ಅರ್ಜಿಗಳನ್ನು ಪ್ರಥಮ ಮೇಲ್ಮನವಿ ಅಧಿಕಾರಿಗಳ ಹಂತದಲ್ಲೇ ವಿಲೇ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು ತಮ್ಮ ಹಂತದಲ್ಲಿ ಪರಿಶೀಲನಾ ಸಭೆಯನ್ನು ಕಾಲಕಾಲಕ್ಕೆ ನಡೆಸುವಂತೆ ಮತ್ತು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿಯನ್ನು ಒಂದು ವಿಷಯವನ್ನಾಗಿ ಕಾರ್ಯಸೂಚಿಯಲ್ಲಿ ತೆಗೆದುಕೊಂಡು ಪ್ರಗತಿ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಮಾತನಾಡಿ, ಜಿಲ್ಲೆಯಲ್ಲಿ ಕಂದಾಯ,ಅರಣ್ಯ. ಪೊಲೀಸ್, ಗ್ರಾಮೀಣಭಿವೃಧ್ದಿ ಇಲಾಖೆಗಳಿಗೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಹಕ್ಕು ಕಾಯಿದೆ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಕಾಯಿದೆಯು ಸಾರ್ವಜನಿಕರಿಗೆ ಆಡಳಿತ ವ್ಯವಸ್ಥೆ ಮೇಲೆ ನಂಬಿಕೆ ಮೂಡಿಸುವ ಮತ್ತು ಪ್ರಜಾಪ್ರಭುತ್ವದ ಬಲಪಡಿಸಲು ಸಹಾಯವಾಗಲಿದ್ದು, ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅತ್ಯಂತ ಶೀಘ್ರದಲ್ಲಿ ಮಾಹಿತಿ ಒದಗಿಸಲು ಸಾಧ್ಯವಾಗಲಿದ್ದು ಪಾರದರ್ಶಕತೆ ತರಲು ಸಾಧ್ಯವಾಗಲಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಾಯಿದೆಯ ಕುರಿತಂತೆ ಸಂಪೂರ್ಣ ಅರಿವು ಹೊಂದಿರಬೇಕು ಎಂದರು.
ಈ ವೇಳೆ ಮಾಹಿತಿ ಆಯುಕ್ತ ನಾರಾಯಣ ಚನ್ನಾಳ, ಜಿ.ಪಂ. ಸಿಇಓ ಡಾ.ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇದ್ದರು.
ಹೀಗಿವೆ 2027ರ ‘ಜನಗಣತಿ’ಯ ವೇಳೆಯಲ್ಲಿ ನಿಮಗೆ ಕೇಳುವಂತ ’33 ಪ್ರಶ್ನೆ’ಗಳು | Census-2027
BIG Alert: ‘ಆನ್ಲೈನ್’ನಲ್ಲಿ ‘IPL ಟಿಕೆಟ್’ ಖರೀದಿಗಾಗಿ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ.!








