ಬೆಂಗಳೂರು : ರಾಜ್ಯದಲ್ಲಿ ನಿನ್ನೆಯಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಕೆಲವು ತಾಂತ್ರಿಕ ದೋಷಗಳಿಂದ ಕೇವಲ ಇದುವರೆಗೂ 10,000 ಜನರ ಸಮೀಕ್ಷೆ ಮಾತ್ರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಇದು ಜಾತಿಗಣತಿ ಅಲ್ಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಷ್ಟೇ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಮೀಕ್ಷೆ ವೇಳೆ ಎಲ್ಲರೂ ಅವರವರ ಜಾತಿಗಳ ಹೆಸರು ಬರೆಸಲಿ. ಯಾರೂ ಕೂಡ ಅವರ ಜಾತಿಗಳ ಹೆಸರು ಬರಿಸಲು ಅಡ್ಡಿಪಡಿಸುತ್ತಿಲ್ಲ. ಕಳೆದ 75 ವರ್ಷಗಳಿಂದ ಕೆಲವರು ಮಾತ್ರ ಬೆಣ್ಣೆ ತುಪ್ಪ ತಿನ್ನುತ್ತಿದ್ದಾರೆ. ಅದು ಎಲ್ಲಿ ತಪ್ಪಿ ಹೋಗುತ್ತೋ ಅಂತ ಕೆಲವರು ವಿರೋಧಿಸುತ್ತಿದ್ದಾರೆ. ವಿರೋಧ ಮಾಡುತ್ತಿರುವ ಅವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಲಿ.
ಜಾತಿ ಹೆಸರಿನಲ್ಲಿ ಕೆಲವರು ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಅದಕ್ಕೆ ತೊಂದರೆ ಆಗುತ್ತದೆ ಎಂದು ರಾಜಕೀಯ ಮಾಡುತ್ತಿದ್ದಾರೆ. ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಎಂದು ನಾವು ಹೇಳಿದ್ವಿ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೇ ಘೋಷಣೆ ಮಾಡಿದ್ದೆವು. ಆಗಲೇ ವಿರೋಧ ಮಾಡದೆ ಈಗ ಯಾಕೆ ವಿರೋಧ ಮಾಡಬೇಕು? ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾಗಿ ಇರುವವರು ಸ್ವಯಂ ಇಚ್ಛೆಯಿಂದ ಮತಾಂತರಕ್ಕೆ ಸಂವಿಧಾನದಲ್ಲಿಯೇ ಅವಕಾಶವಿದೆ. ಬಿಜೆಪಿಯವರ ನಡೆ ಕೆಲಸ ಇಲ್ಲದ ಬಡಗಿ ಏನೋ ಮಾಡಿದಂತಿದೆ ಎಂದು ಕಿಡಿ ಕಾರಿದರು.