ಬೆಂಗಳೂರು: ಈಗಾಗಲೇ ವೇತನ ತಡವಾಗುತ್ತಿದ್ದ ಕಾರಣ, ಕೆ ಎಸ್ ಆರ್ ಟಿ ಸಿ ನೌಕರರಿಗೆ ( KSRTC Employees ) ಆಗುತ್ತಿದ್ದಂತ ಸಮಸ್ಯೆಯನ್ನು ಸರಿ ಪಡಿಸಲಾಗಿತ್ತು. ಪ್ರತಿ ತಿಂಗಳು ಒಂದನೇ ತಾರೀಕಿನಂದೇ ಎಲ್ಲಾ ಸಿಬ್ಬಂದಿಗಳಿಗೂ ವೇತನ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಈ ಬಳಿಕ ಕೆ ಎಸ್ ಆರ್ ಟಿ ಸಿ ನೌಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಅದೇ ಇದೇ ಮೊದಲ ಬಾರಿಗೆ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ( KSRTC Worker ) ರೂ.50 ಲಕ್ಷ ಅಪಘಾತ ವಿಮಾ ಯೋಜನೆ ( Accident Insurance Plan ) ಸೌಲಭ್ಯ ಜಾರಿಗೊಳಿಸಲಾಗಿದೆ.
ಹೌದು. ಇದುವರೆಗೂ ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರದ ಹಣ ಅವರ ಅವಲಂಬಿತರಿಗಾಗಲಿ ಅಥವಾ ಅವರಿಗಾಗಲಿ ಲಭಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ನಿಗಮ ಇರಿಸಿದೆ.
ಸಿಬ್ಬಂದಿಗಳು ಸಂಸ್ಥೆಗಾಗಿ ಹಗಲಿರುಳು ದುಡಿಯುತ್ತಾರೆ ಅವರ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಪರಿವಾರದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದೆಂಬ ಕಾರಣದಿಂದ ಅವರ ಅವಲಂಬಿತರ ಹಿತ ಕಾಪಾಡುವ ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ರವರೊಂದಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕರು ಹಾಗೂ ಅಧ್ಯಕ್ಷರಾದ ಎಂ. ಚಂದ್ರಪ್ಪರವರ ( M Chandrappa ) ಸಮ್ಮುಖದಲ್ಲಿ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರಾದಂತ ವಿ.ಅನ್ಬುಕುಮಾರ್ ( V Anbhukumar ) ಹಾಗೂ ಎಸ್ ಬಿಐನ ಡಿಜಿಎಂ ಪಂಕಜ್ ತಪ್ಲಿಯಾಲ್ ಅವರು ಸಹಿ ಹಾಕಿದರು.
BIGG NEWS: ಮಳವಳ್ಳಿ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ಜಮೀರ್
ಈ ಎಲ್ಲಾ ಸಂದರ್ಭದಲ್ಲಿ ಅಪಘಾತ ವಿಮಾ ಯೋಜನೆ ಪರಿಹಾರ ಲಭ್ಯ
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿರುವ ನಿಗಮದ ನೌಕರರಿಗೆ ” ಪ್ರೀಮಿಯಂ ರಹಿತ” ವೈಯುಕ್ತಿಕ ಅಪಘಾತ ವಿಮೆಯನ್ನು ಒಳಗೊಂಡಿದೆ. ( ಈಗಾಗಲೇ ನಿಗಮದ ಶೇ55 ರಷ್ಷು ಸಿಬ್ಬಂದಿಗಳು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಗಳನ್ನು ಹೊಂದಿರುತ್ತಾರೆ)
* ಈ ವೈಯುಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಫಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ.50 ಲಕ್ಷಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ.
* ಅಫಘಾತದಲ್ಲಿ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ರೂ.20 ಲಕ್ಷಗಳ ಹ಼ಣ ಹಾಗೂ ಶಾಶ್ವತ ಭಾಗಶ: ಅಂಗವೈಕಲ್ಯ ಉಂಟಾದಲ್ಲಿ ರೂ.10 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ.
* ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ (On duty and Off duty) ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.
* ಸಿಬ್ಬಂದಿಗಳ ಅಪಘಾತದಲ್ಲಿನ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಟ ರೂ.10 ಲಕ್ಷ, ಔಷಧಗಳ ಆಮದಿಗಾಗಿ ಗರಿಷ್ಟ ರೂ.5 ಲಕ್ಷ, ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ ರೂ.2 ಲಕ್ಷ (ರೂ.50 ಲಕ್ಷ + ರೂ.2 ಲಕ್ಷ), ಏರ್ ಅಂಬ್ಯೂಲೆನ್ಸ್ ಸೇವೆಗೆ ರೂ.10 ಲಕ್ಷ ವಿಮಾ ಪರಿಹಾರ ನೀಡಲಾಗುವುದು.
* ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟರೆ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಟ ರೂ.5 ಲಕ್ಷ ಹಾಗೂ ಹೆಣ್ಣು ಮಗಳ ವಿವಾಹಕ್ಕೆ ಗರಿಷ್ಟ ರೂ.5 ಲಕ್ಷಗಳ ವರೆಗೆ ಆರ್ಥಿಕ ಸಹಾಯವನ್ನು ಈ ವಿಮಾ ಯೋಜನೆಯು ಒಳಗೊಂಡಿರುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷರಾದ ಎಂ. ಚಂದ್ರಪ್ಪ ನವರು ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಉತ್ತಮವಾದ ಯೋಜನೆಯಾಗಿರುವುದಾಗಿ ತಿಳಿಸಿ, ಭಾರತೀಯ ಸ್ಟೇಟ್ ಬ್ಯಾಂಕ್ ರವರ ಸಹಯೋಗಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ರಸ್ತೆ ಸಾರಿಗೆ ನಿಗಮಗಳಲ್ಲಿಯೇ ಅತ್ಯಧಿಕ ಮೊತ್ತದ ಅಪಘಾತ ( On duty and Off duty ಒಳಗೊಂಡಂತೆ ನೀಡಲಾಗುವ) ವಿಮಾ ಯೋಜನೆಯಾಗಿರುವುದಾಗಿ ಸಂತಸ ವ್ಯಕ್ರಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕೆ ಎಸ್ ಆರ್ ಟಿಸಿಯ ನಿರ್ದೇಶಕರು ( ಸಿಬ್ಬಂದಿ ಮತ್ತು ಜಾಗೃತ) ಡಾ. ನವೀನ್ ಭಟ್ ವೈ, ಸರೋಜ್ ಕುಮಾರ್ ದಾಸ್, ಮುಖ್ಯ ವ್ಯವಸ್ಥಾಪಕರು, ಎಸ್.ಬಿ.ಐ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.