ಕರಿ ಮೆಣಸು ಬೆಳೆ ನಿರ್ವಹಣೆ ಮಹತ್ವದ ವಿಧಾನವನ್ನು Karnataka Organic Growers Association ತಿಳಿಸಿ ಕೊಟ್ಟಿದೆ. ಆ ಮಾಹಿತಿಯನ್ನು ಮುಂದೆ ಓದಿ.
ನರ್ಸರಿ ಜಾಗದ ಮಣ್ಣನ್ನು ಬಿಸಿಲಿಗೆ ಚೆನ್ನಾಗಿ ಒಣಗಿಸಿ.
ಪ್ರತಿ ಪಾತಿಗೆ 250 ಗ್ರಾಂ ನಷ್ಟು ಟ್ರೈಕೋಡೆರ್ಮ ಶೀಲಿಂದ್ರವನ್ನು 25 ಕೇಜಿ ಕಾಂಪೋಸ್ಟ್ ಜೊತೆಗೆ ಮಣ್ಣಿನಲ್ಲಿ ಬೆರೆಸಿರಿ.
ತ್ವರಿತ ಸಸ್ಯಾಭಿವೃದ್ಧಿಗೆ 50 ಮೀ. ಲಿ ಎರೆಜಲವನ್ನು ಬೇರು ಬಿಟ್ಟ ಸಸಿ ತುಂಡುಗಳಿಗೆ ಸಿಂಪಡಿಸಿ.
ಬೇರು ಬಿಟ್ಟ ತುಂಡುಗಳನ್ನು ನೆಡುವ ಸಮಯದಲ್ಲಿ ಪ್ರತಿ ಗುಣಿಗೆ 2ಕಿಲೋ ಗ್ರಾಂ ಕಾಂಪೋಸ್ಟ್ ಮತ್ತು 125 ಗ್ರಾಂ ನಷ್ಟು ಶಿಲಾ ರಂಜಕವನ್ನು ಹಾಕಿರಿ.
ಪ್ರತಿ ಬಳ್ಳಿಗೆ 10ಕೇಜಿ ಯಷ್ಟು ಕಾಂಪೋಸ್ಟ್ ಹಸಿರೆಲೇ ಗೊಬ್ಬರ, ಎರೆಗೊಬ್ಬರ ಮತ್ತು ತೆಂಗಿನ ನಾರಿನ ಪುಡಿಯನ್ನು ಮಿಶ್ರ ಮಾಡಿ ಹಾಕಿರಿ.
ಇದರ ಜೊತೆಗೆ ಮೇ ಜೂನ್ ತಿಂಗಳಲ್ಲಿ 200 ಗ್ರಾಂ ಇಂದ 2 ಕೇಜಿ ಬೇವಿನ ಹಿಂಡಿಯನ್ನು ಸೇರಿಸಿ. ತಪ್ಪದೇ 50ಗ್ರಾಂ ಟ್ರೈಕೋಡರ್ಮ ಹಾರ್ಜೆನಿಯಂ ಬಳಸಿ.
100 ಲೀಟರ್ ನೀರಿಗೆ 400 ಮೀ. ಲಿ ಯಷ್ಟು ಬೇವಿನ ಎಣ್ಣೆ ಬೆರೆಸಿ ಜೂನಿಂದ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಪ್ರತಿ 21 ದಿನಕ್ಕೊಮ್ಮೇ ಸಿಂಪಡಿಸಿ.
ಕರಿಮೆಣಸು ಅಥವಾ ಕಾಳುಮೆಣಸು “ಕಪ್ಪು ಚಿನ್ನ”, “ಸಾಂಬಾರು ಪದಾರ್ಥಗಳ ರಾಜ”, “ವೈದ್ಯ ಲೋಕದ ದಿವ್ಯೌಷಧ” ಈ ಕಾಳುಮೆಣಸು.
ಇದರ ತವರೂರು ನಮ್ಮ ದೇಶ ಭಾರತ.
“ಕಪ್ಪು ಚಿನ್ನ” ಎಂದೇ ಹೆಸರಾಗಿದ್ದ ಕಾಳುಮೆಣಸು ಬಹಳ ಬೆಲೆಬಾಳುವ ವಾಣಿಜ್ಯ ಪದಾರ್ಥ. ಇದನ್ನು ಹಣದ ರೂಪದಲ್ಲಿ ಬಳಸಿದ್ದೂ ಇದೆ. ಸಹ್ಯಾದ್ರಿಯ ಮೆಣಸು ಬೆಳೆ ಪಶ್ಚಿಮ ಕರಾವಳಿಯ ಹಳೆಯ ರೇವುಪಟ್ಟಣಗಳಿಂದ ಜಗತ್ತಿನ ಮೂಲೆಮೂಲೆಗಳಿಗೆ ರಫ್ತಾಗುತ್ತಿತ್ತು. ಪ್ರಾಚೀನ ರೋಮನ್ನರಿಗೆ, ಗ್ರೀಕರಿಗೆ ಭಾರತದ ಮೆಣಸಿನ ರುಚಿ ಹತ್ತಿತ್ತು. ಭಾರತಕ್ಕೆ ವಿದೇಶಿಗಳು ಬರಲು ಪ್ರಮುಖ ಕಾರಣವಾದ ಸಂಬಾರು ಪದಾರ್ಥಗಳಲ್ಲಿ ಈ ಕಾಳು ಮೆಣಸು ಪ್ರಮುಖ ಪಾತ್ರ ವಹಿಸುತ್ತದೆ.
ಕರಿಮೆಣಸು ಒಂದು ಅಪ್ಪುಸಸ್ಯವಾಗಿದೆ. ಅಂದರೆ ಬಳ್ಳಿಯ ಗಂಟುಗಳಲ್ಲಿ ಬೇರು ಬರುತ್ತದೆ. ಬೇರುಗಳು ಒಂದೊ ಆಧಾರ ಸಸ್ಯವನ್ನು ಅಪ್ಪುತ್ತವೆ ಅಥವಾ ಮಣ್ಣಿನಲ್ಲಿ ಇಳಿಯುತ್ತವೆ. ಈ ಬೇರುಗಳು ಮಣ್ಣು ಅಥವಾ ಮರದಕಾಂಡದಿಂದ ಪೋಷಕಾಂಶಗಳನ್ನು ಪಡೆಯುತ್ತವೆ. ಹೂವುಗಳು ಸೂಕ್ಷ್ಮವಾಗಿದ್ದು ಗೆರೆಗಳ ಮೇಲೆ ಮೂಡುತ್ತವೆ. ಗೆರೆಗಳು ಎಳತಾದ ಎಲೆಯ ಸಂದಿಯಲ್ಲಿ ಹುಟ್ಟುತ್ತವೆ. ಎಳೆ ಗೆರೆಗಳು 4 ರಿಂದ 8 ಸೆಂ.ಮೀ ಉದ್ದವಾಗಿದ್ದು ಪೂರ್ಣ ಬೆಳೆದ ಗೆರೆಯು 7 ರಿಂದ 15 ಸೆಂ.ಮೀ ಉದ್ದವಾಗಿರುತ್ತವೆ. ಬಳ್ಳಿಯು ಫಲವತ್ತಾದ ಹಾಗು ಪಸೆ(ತೇವ) ಇರುವ ಮಣ್ಣಿನಲ್ಲಿ ಬೆಳೆಯುತ್ತದೆ. ಸ್ವಾಭಾವಿಕವಾಗಿ ಹಣ್ಣಿನಿಂದ ಹಾಗು ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಭಿವೃದ್ಧಿಯಾಗುತ್ತದೆ. ಕೃಷಿ ಮಾಡುವವರು ಬಳ್ಳಿಯನ್ನು 1 ಮೀ ಉದ್ದಕ್ಕೆ ಕತ್ತರಿಸಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಸಸ್ಯಗಳ ಮೇಲೆ ಇವು ಬೇಗ ಬೆಳೆಯುತ್ತವೆ. ಉತ್ತಮ ಗಾಳಿ ಬೆಳಕು ಬಳ್ಳಿಗೆ ಅವಶ್ಯವಾಗಿದೆ. ಹಾಗೇಯೆ ಸ್ವಲ್ಪ ನೆರಳು ಕೂಡ ಅವಶ್ಯ. ಬಳ್ಳಿಯು 3 ರಿಂದ 5 ವರ್ಷಗಳಲ್ಲಿ ಫಲ ನೀಡಲು ಪ್ರಾರಂಭಿಸುತ್ತದೆ. ಗೆರೆಯಲ್ಲಿ ಒಂದೆರಡು ಕಾಳುಗಳು ಹಣ್ಣಾದಾಗ ಕೊಯ್ಲು ಪ್ರಾರಂಭಿಸಬಹುದು. ಕಾಳು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೊಯ್ಲು ಮಾಡಿದ ಗೆರೆಗಳಿಂದ ಕಾಳನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಮೂರು ನಾಲ್ಕು ಬಿಸಿಲಿನ ನಂತರ ಕಾಳುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.
ಕರಿಮೆಣಸಿನ ಗಿಡವು (ಬಳ್ಳಿ) ತೀರ ಶುಷ್ಕವಲ್ಲದ ಹಾಗು ಪ್ರವಾಹಕ್ಕೆ ಒಳಗಾಗದಂಥಹ, ತೇವಾಂಶಸಹಿತ, ಹೀರಿಕೊಳ್ಳುವಂಥಹ ಹಾಗೂ ಸಾವಯವ ಕೂಡಿತ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಬಳ್ಳಿ ಚೆನ್ನಾಗಿ ಬೆಳೆಯಲು ನುಣುಪಾದ ಮೇಲ್ಮೈಗಿಂತ ಒರಟಾದ ಮೇಲ್ಮೈ ಅನುಕೂಲವಾಗಿರುತ್ತದೆ. ಅಕ್ಕ ಪಕ್ಕದ ಮರಗಳು ಅನತಿ ದೂರದಲ್ಲಿದ್ದು ಬಳ್ಳಿಗೆ ಬೇಕಾದ ನೆರಳು ಕೊಡುತ್ತದೆ. ಬೇರುಗಳು ಕೊಳೆತ ಎಲೆಗಳಿಂದ ಹಾಗೂ ಗೊಬ್ಬರದಿಂದ ಆವೃತವಾಗಿದ್ದು, ಕಾಂಡಗಳನ್ನು ವರ್ಷಕ್ಕೆರಡು ಬಾರಿ ಕತ್ತರಿಸಿ ಅಚ್ಚುಕಟ್ಟಾಗಿರಿಸಲಾಗುತ್ತದೆ. ಶುಷ್ಕ ವಾತಾವರಣದಲ್ಲಿ 3 ವರ್ಷದವರೆಗೆ ಹೊಸ ಸಸ್ಯಗಳಿಗೆ ಶುಷ್ಕ ಮಣ್ಣಿನಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ನೀರುಣಿಸಬೇಕಾಗುತ್ತದೆ. ತಮ್ಮ 3 ರಿಂದ 5 ನೇ ವರ್ಷದಲ್ಲಿ ಸಸ್ಯಗಳಲ್ಲಿ ಹಣ್ಣು ಬಿಡುತ್ತವೆ. ನೆಡಲಿಕ್ಕಾಗಿ ಬಳ್ಳಿಯ ತುಂಡುಗಳನ್ನು, ಇಳುವರಿ ಮತ್ತು ಹಣ್ಣಿನ ಗುಣಮಟ್ಟವನ್ನು ಆಧರಿಸಿ ಆಯ್ಕೆಮಾಡಿದ ತಳಿಗಳಿಂದ ಸಾಧಾರಣವಾಗಿ ಪಡೆದುಕೊಳ್ಳಲಾಗುತ್ತದೆ.
ಕರಿಮೆಣಸು ಕಾಳು ಪ್ರಪಂಚದಲ್ಲೇ ಅತಿ ಹೆಚ್ಚು ವ್ಯಾಪಾರವಾಗುವ ಸಾಂಬಾರ ಪದಾರ್ಥ. 2002 ನೇ ಇಸವಿಯಲ್ಲಿ ಸಾಂಬಾರ ಪದಾರ್ಥಗಳ ಒಟ್ಟು ಆಮದಿನಲ್ಲಿ ಶೇ 20 ಕರಿಮೆಣಸನ್ನು ಆಮದು ಮಾಡಿಕೊಳ್ಳಲಾಗಿತ್ತು. ಕರಿಮೆಣಸಿನ ಮಾರಾಟ ದರದಲ್ಲಿ ವ್ಯತ್ಯಾಸವಾಗುವುದು ಮಾಮೂಲು, ವರ್ಷದಿಂದ ವರ್ಷಕ್ಕೆ ಏರಿಳಿತವಾಗುತ್ತಿರುತ್ತದೆ. ಅಂತರರಾಷ್ಟ್ರೀಯ ಕರಿಮೆಣಸು ವಿನಿಮಯ ಕೇಂದ್ರವು ಕೇರಳದ ಕೊಚ್ಚಿಯಲ್ಲಿದೆ.
ಇದನ್ನು ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ ಹಲವಾರು, ರೋಗಗಳಿಗೆ ಉತ್ತಮ ಔಷಧಿಯೂ ಹೌದು. ಭಾರತ, ಇಂಡೋನೇಷ್ಯಾ, ಶ್ರೀಲಂಕಾ, ಬ್ರೆಜಿಲ್ ದೇಶಗಳಲ್ಲಿಯೂ ಇದರ ಉತ್ಪನ್ನ ಸಾಕಷ್ಟಿದೆ.
- ಮೆಣಸನ್ನು ವಿವಿಧ ಅಡುಗೆ ಪದಾರ್ಥಗಳಲ್ಲಿ ರುಚಿ ಮತ್ತು ವಾಸನೆಗಾಗಿ ಬಳಸುತ್ತಾರೆ. ಸಾರು, ಸಾಂಬಾರುಗಳ ತಯಾರಿಕೆಯಲ್ಲಿ ಅದರಲ್ಲೂ ಮಾಂಸಹಾರಗಳ ತಯಾರಿಕೆಯಲ್ಲಿ, ಬೇಕರಿ ಪದಾರ್ಥಗಳು ಮತ್ತು ಅನೇಕ ತಂಪು ಪಾನೀಯಗಳ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುತ್ತಾರೆ.
- ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ ಹಲವಾರು, ರೋಗಗಳಿಗೆ ಉತ್ತಮ ಔಷಧಿಯೂ ಹೌದು.
- ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಮೆಣಸನ್ನು ಮರಿಚ, ಶ್ಯಾಮ, ವಲ್ಲಿಜ, ಕೋಲ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕಟು (ಖಾರ) ತಿಕ್ತ (ಕಹಿ) ರಸಗಳುಳ್ಳ ಇದು ಉಷ್ಣ ವೀರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ತೀಕ್ಷ್ಣ ಮತ್ತು ರೂಕ್ಷ ಗುಣಗಳುಳ್ಳ ಇದು, ಸ್ವಲ್ಪ ಪ್ರಮಾಣದಲ್ಲಿ ಪಿತ್ತವನ್ನು ಹೆಚ್ಚು ಮಾಡುತ್ತದೆ.
- ಅಗ್ನಿ ಮಾಂದ್ಯ, ಅಜೀರ್ಣ, ಶ್ವಾಸಕಾಸ ಮುಂತಾದ ಅನೇಕ ರೋಗಗಳಲ್ಲಿ ಉಪಯೋಗಕ್ಕೆ ಬರುವ ಮೆಣಸು ಒಂದು ಉತ್ತಮ ಶೂಲ (ನೋವು) ನಿವಾರಕ ಹಾಗೂ ಜಂತು ನಾಶಕವಾಗಿದೆ.
- ಮೆಣಸು, ಶುಂಠಿ, ಹಿಪ್ಪಲಿ ಇವು ಮೂರನ್ನು ಒಟ್ಟಿಗೆ ಕೂಡಿಸಿ, ತ್ರಿಕಟು ಎಂದು ಕರೆಯುತ್ತಾರೆ. ಒಳ್ಳೆಯ ದೀಪನ, ಪಾಚನ ಹಾಗೂ ಜೀರ್ಣಕಾರಕವಾಗಿರುವ ತ್ರಿಕಟು ಚೂರ್ಣವನ್ನು ಅನೇಕ ಔಷಧಿಗಳ ತಯಾರಿಕೆಯಲಿ ಬಳಸುತ್ತಾರೆ.
ಔಷಧವಾಗಿ ಕಾಳುಮೆಣಸು:-
ಕೆಮ್ಮು ಮತ್ತು ಕಫ: ರೋಗಗಳಲ್ಲಿ 100ರಿಂದ 250 ಮಿಗ್ರಾಂ. ಕಾಳು ಮೆಣಸಿನ ಚೂರ್ಣವನ್ನು ಅರ್ಧ ಚಮಚ ತುಪ್ಪ ಒಂದು ಚಮಚ ಜೇನುತುಪ್ಪ ಸೇರಿಸಿ ತಿಂದ ಮೇಲೆ, ಒಂದು ಲೋಟ ಬಿಸಿಯಾದ ಹಾಲಿಗೆ ಸ್ವಲ್ಪ ಅರಿಶಿನದ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ತೆಗೆದುಕೊಂಡರೆ ಕಟ್ಟಿರುವ ಕಫವು ಕರಗಿ, ಕೆಮ್ಮು ಕಡಿಮೆಯಾಗುತ್ತದೆ. ಶೀತ ನೆಗಡಿಗಳು ದೂರವಾಗುತ್ತವೆ.
- ಇರುಳು ಕುರುಡು: ಕೆಲವರಿಗೆ ಹಗಲು ಹೊತ್ತಿನಲ್ಲಿ ಕಣ್ಣಿನ ದೃಷ್ಟಿ ಚೆನ್ನಾಗಿ ಇದ್ದು, ರಾತ್ರಿಯಾದ ಕೂಡಲೇ ಕಣ್ಣು ಕಾಣಿಸದಂತಾಗುತದೆ. ಇದಕ್ಕೆ ನಿಶಾಂಧತೆ ಅಥವಾ ರಾತ್ರಿ ಕುರುಡು ಎನ್ನುತ್ತಾರೆ. ಮೆಣಸಿನ ಕಾಳನ್ನು ಮೊಸರಿನ ತಿಳಿಯಲ್ಲಾಗಲಿ ಅಥವಾ ಎದೆಯ ಹಾಲಿನಲ್ಲಾಗಲಿ ತೇದು ಅಂಜನದಲ್ಲಿ ಕಣ್ಣಿಗೆ ಹಚ್ಚಿದರೆ ನಿಶಾಂಧತೆ ದೂರವಾಗುತ್ತದೆ. ಮೆಣಸು ಬಹಳ ತೀಕ್ಷ್ಣಗುಣ ಉಳ್ಳದ್ದಾಗಿರುವುದರಿಂದ, ಕಣ್ಣಿಗೆ ಹಚ್ಚಿದಾಗ, ಕಣ್ಣಿನಲ್ಲಿ ಅತಿಯಾದ ಉರಿಯುಂಟಾಗುತ್ತದೆ. ಆದುದರಿಂದ ಇದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಅತಿ ಎಚ್ಚರಿಕೆಯಿಂದ ಹಚ್ಚಬೇಕು. ವೈದ್ಯರ ಸಲಹೆಯನ್ನು ಪಡೆದು ಈ ಚಿಕಿತ್ಸೆಯನ್ನು ಮಾಡುವುದು ಒಳ್ಳೆಯದು.
- ಪೀನಸ ರೋಗದಲ್ಲಿ: ನೆಗಡಿ ಮತ್ತ ಶೀತ ಬಹಳ ದಿನಗಳವರೆಗೆ ವಾಸಿಯಾಗದಿದ್ದರೆ ಹಾಗೂ ಮೂಗಿನಿಂದ ಗಟ್ಟಿಯಾದ ಸಿಂಬಳ ಸೋರುವುದು, ಮೂಗು ಕಟ್ಟಿ ಉಸಿರಾಟಕ್ಕೆ ತೊಂದರೆ ಮತ್ತು ಕಣ್ಣಿನ ಉಬ್ಬಿನ ಜಾಗ್ರದಲ್ಲಿ ನೋವು, ಭಾರ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇದನ್ನು ದುಷ್ಟಪೀನಸ ಎಂದು ಕರೆಯುತ್ತಾರೆ. ಈ ರೋಗ ಹಳೆಯದಾದಾಗ ಮೂಗಿಗೆ ವಾಸನೆ ಸಹ ಗೊತ್ತಾಗುವುದಿಲ್ಲ. ಇಂತಹ ಸಮಯದಲ್ಲಿ ಕಾಳು ಮೆಣಸಿನ ಚೂರ್ಣವನ್ನು ಬೆಲ್ಲ ಮತ್ತು ಹಸುವಿನ ಮೊಸರಿನಲ್ಲಿ ಸೇವಿಸುವುದು ಉತ್ತಮ.
- ಕಫ ಮತ್ತು ಶೀತಜ್ವರದಲ್ಲಿ: ಅನೇಕರಿಗೆ ಮಳೆಯಲ್ಲಿ ನೆನೆಯುವುದರಿಂದ ಶೀತ, ನೆಗಡಿ, ಕೆಮ್ಮು, ತಲೆನೋವು, ಜ್ವರ ಉಂಟಾಗುತ್ತದೆ. ಆಗ ಮೆಣಸು, ಶುಂಠಿ, ಜೀರಿಗೆಗಳನ್ನು1:2:3ರ ಪ್ರಮಾಣದಲ್ಲಿ ಸೇರಿಸಿ ಕಷಾಯವನ್ನು ತಯಾರಿಸಿ ಅದಕ್ಕೆ ಬೆಲ್ಲ ಸೇರಿಸಿ ಸೇವಿಸಿದರೆ ಕಫ ಮತ್ತು ಶೀತದಿಂದ ಉಂಟಾದ ಜ್ವರ ಕಡಿಮೆಯಾಗುತ್ತದೆ. ಕೆಲವು ವೇಳೆ ಅಲರ್ಜಿಯಿಂದ ಗಂಟಲು ಕೆರತ, ಕೆಮ್ಮುಗಳು ಉಂಟಾಗುತ್ತದೆ. ಶೀತದಿಂದ ಹೆಚ್ಚಾಗುವ ಈ ಕೆಮ್ಮು ರಾತ್ರಿಯಲ್ಲಿ ಉಲ್ಬಣಗೊಂಡು ನಿದ್ದೆಗೆ ತೊಂದರೆಯನ್ನು ಉಂಟುಮಾಡುತ್ತದೆ. ಆಗ ಎರಡು ಮೆಣಸಿನಕಾಳನ್ನು ಒಂದೆರಡು ಹರಳು ಉಪ್ಪನ್ನು ಸೇರಿಸಿ ದವಡೆಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿದ್ದರೆ ಗಂಟಲು ಕೆರೆತ ಮತ್ತು ನೋವು ಕಡಿಮೆಯಾಗಿ ಕೆಮ್ಮು ನಿಲ್ಲುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.
- ಮೆಣಸಿನ ಶುದ್ಧಿ: ಔಷಧಿಗಳಲ್ಲಿ ಉಪಯೋಗ ಮಾಡುವ ಮೊದಲು ಇದನ್ನು ಶುದ್ಧಿ ಮಾಡಿಕೊಳ್ಳುವುದು ಒಳ್ಳೆಯದು. ಕಾಳು ಮೆಣಸನ್ನು ಹುಳಿ ಮಜ್ಜಿಗೆಯಲ್ಲಿ ಮೂರು ದಿನ ನೆನಸಿ ಇಟ್ಟು ಅನಂತರ ತೆಗೆದು ಉಪಯೋಗಿಸಿದರೆ ಉತ್ತಮ ಗುಣ ದೊರಕುತ್ತದೆ, ಆಯುರ್ವೇದ ವೈದ್ಯರು ಹಲವಾರು ಚೂರ್ಣ, ಲೇಹ ಕಷಾಯ, ತೈಲ ಮುಂತಾದ ವಿವಿಧ ಬಗೆಯ ಅಮೂಲ್ಯ ಔಷಧಿಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
ರೈತರಿಗೆ ಉಪಯುಕ್ತ ಮಾಹಿತಿ: ಈ ಸಮಗ್ರ, ಸುಸ್ಥಿತ ಕೃಷಿ ಪದ್ಧತಿ ಅನುಸರಿಸಿ, ಲಕ್ಷಾಂತರ ಆದಾಯ ಗಳಿಸಿ
ಒಂದು ಹನಿಯಿಂದ್ಲೂ ದೊಡ್ಡ ಹಾನಿ ; ‘ಮದ್ಯ’ ನಿಮ್ಮ ಮೆದುಳನ್ನ ಹೇಗೆ ಹಾನಿ ಮಾಡುತ್ತೆ ಅಂತಾ ತಿಳಿದ್ರೆ ಶಾಕ್ ಆಗ್ತೀರಾ!








