ಬೆಂಗಳೂರು : ಒಂದು ಕಾಲದಲ್ಲಿ ನಾನು ಸಿಗರೇಟ್ ಹೆಚ್ಚು ಸೇದುತ್ತಿದ್ದೆ. ಆದರೆ ಸಿಗರೇಟ್ ಹೆಚ್ಚು ಸೇದುವುದರಿಂದ ಆಯಸ್ಸು ಕಡಿಮೆ ಆಗುತ್ತದೆಂದು ತಿಳಿದು ಸಿಗರೇಟ್ ಬಿಟ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿಂದು ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ನಂಗು ಸಿಗರೇಟ್ ಸೇದುವ ಅಭ್ಯಾಸವಿತ್ತು. ಹಾರ್ಟ್ ಸಮಸ್ಯೆ ಬಂತು. ಅದರಿಂದಾಗಿ ಆಂಜಿಯೋಪ್ಲಾಸ್ಟಿ ಒಳಗಾಗಿದ್ದೆ ಎಂದು ಅವರ ಅನುಭವ ಸ್ಮರಿಸಿದರು.
ಸಿಗರೇಟ್ ಆರೋಗ್ಯಕ್ಕೆ ಮಾರಕ, ಕ್ಯಾನ್ಸರ್ ಬರುತ್ತದೆ ಎಂದರೂ ಕೂಡ ಸಿಗರೇಟ್ ಸೇದುತ್ತಾರೆ. ಜನರು ಕೂಡ ಜಾಗೃತರಾಗಬೇಕು. ದುಶ್ಚಟಗಳಿಂದ ದೂರವಿರಬೇಕು ನಮ್ಮ ಜೀವನ ಶೈಲಿಯ ಜೊತೆಗೆ ಆಹಾರ ಪದ್ಧತಿ ಬದಲಾಯಿಸಿಕೊಳ್ಳಿ, ನಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿ ಬದಲಾಯಿಸಿಕೊಂಡರೆ ಅನೇಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ರೋಗಿಯ ಪ್ರಾಣ ಉಳಿಸಿದರೆ ವೈದ್ಯರೇ ದೇವರಾಗುತ್ತಾರೆ. ತಮ್ಮ ವೃತ್ತಿಯಲ್ಲಿ ಯಾವುದೇ ಕಾರಣಕ್ಕೂ ವೈದ್ಯರು ನಿರ್ಲಕ್ಷ್ಯ ತೋರಬಾರದು. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅನಾಹುತವಾಗುತ್ತದೆ ಎಂಬ ಎಚ್ಚರವಿರಬೇಕು. ಇದು ದೇವರ ಕೆಲಸ ಎಂದು ಮಾಡಿದರೆ ಸಮಾಜದಲ್ಲಿ ರೋಗಗಳನ್ನು ತಡೆಗಟ್ಟುವ, ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ರೋಗಗಳನ್ನು ತಡೆಗಟ್ಟುವುದನ್ನು ಕೂಡ ಆರೋಗ್ಯ ಇಲಾಖೆ ಗಮನದಲ್ಲಿರಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.