ಬೆಂಗಳೂರು : ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇನ್ನೇನು ಎರಡೇ ದಿನಗಳಲ್ಲಿ ಪ್ರಕಟವಾಗುತ್ತದೆ. ಈ ಕುರಿತಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವುದೇ ಅನುಮಾನವಿಲ್ಲ ಎನ್.ಡಿ.ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿಯೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುತ್ತಾರೆ. ಚನ್ನಪಟ್ಟಣದಲ್ಲಿ ನಾನು 15 ದಿನ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಚನ್ನಪಟ್ಟಣ ಕ್ಷೇತ್ರದ ಜನತೆಯ ಭಾವನೆ ಏನು ಅಂತ ಗೊತ್ತಿದೆ. ಯಾವುದೇ ಅನುಮಾನ ಇಲ್ಲ ಎನ್‌ಡಿಎ ಅಭ್ಯರ್ಥಿಯೇ ಗೆಲ್ಲುತ್ತಾರೆ.ಇನ್ನು ಮಹಾರಾಷ್ಟ್ರ, ಜಾರ್ಖಂಡ್ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಜನರ ಆಶೀರ್ವಾದದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದ ಮಾನದಂಡದಂತೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ವಿಚಾರವಾಗಿ ಇಂದು ಬಂದ ವರದಿ ಆಧಾರದಲ್ಲಿ ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಕಳೆದೊಂದು ವಾರ ಯಾಕೆ ಹೇಳಿಲ್ಲ? ಸರ್ಕಾರ ತನ್ನ ನಿಲುವಿಗೆ ಮತ್ತು ಜನರ ಪ್ರತಿಕ್ರಿಯೆಗೆ ಉತ್ತರ ಕೊಡೋಕೆ ಆಗುತ್ತಿಲ್ಲ. ಸಿಎಂ ಒಂದು ಹೇಳಿಕೆ ಕೊಡುತ್ತಾರೆ ಸಚಿವರೆ ಬೇರೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಕ್ಲಾರಿಟಿ ಇಲ್ಲ. ಗ್ಯಾರೆಂಟಿ ಯೋಜನೆಗಳ ಬಗ್ಗೆ ನಾನು ಲಘುವಾಗಿ ಮಾತನಾಡಿಲ್ಲ. ಗ್ಯಾರೆಂಟಿ ಕೊಡಲು ಆರ್ಥಿಕವಾಗಿ ಸಮಸ್ಯೆ ಇಲ್ಲ. ತೆರಿಗೆ ಮೂಲಕ ರಾಜ್ಯ ಸರ್ಕಾರದ ಖಜಾನೆ ತುಂಬಿಸಿಕೊಂಡಿದ್ದಾರೆ. ನಿರ್ವಹಣೆಯಲ್ಲಿ ಸಮಸ್ಯೆ ಇದೆ ಅದನ್ನು ಸರಿಪಡಿಸುವಂತೆ ಹೇಳಿದ್ದೇನೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.