ದಾವಣಗೆರೆ : ಮಹಿಳೆ ಮೇಲೆ 2 ರಾಟ್‌ವೀಲರ್ ನಾಯಿಗಳು ಭೀಕರ ದಾಳಿ ಮಾಡಿ ಕೊಂದು ಹಾಕಿದ ಘಟನೆಗೆ ಸಂಬಂಧಿಸಿದಂತೆ ನಾಯಿಗಳ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಶೈಲೇಶ್ ಕುಮಾರ್ ಬಂಧಿತರಾಗಿದ್ದು, ನಾಯಿಗಳನ್ನು ಜಿಲ್ಲೆಯ ಹೊನ್ನೂರು ಕ್ರಾಸ್ ಬಳಿ ಬಿಟ್ಟು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೈಲೇಶ್ ಅವರು ನಾಯಿಗಳನ್ನು ಆಟೋ ರಿಕ್ಷಾದಲ್ಲಿ ತಂದು ರಸ್ತೆ ಬದಿ ಬಿಟ್ಟು ಹೋಗಿದ್ದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿ ಆತನನ್ನು ಬಂಧಿಸಿದ್ದಾರೆ. ಬುಧವಾರ ರಾತ್ರಿ ಶೈಲೇಶ್ ತಮ್ಮ 2 ರಾಟ್‌ವೀಲರ್ ನಾಯಿಗಳನ್ನು ಬಿಟ್ಟು ಕಾಲ್ಕಿತ್ತಿದ್ದರು. ಈ ನಾಯಿಗಳು ಅಮಲು ಬಂದಂತೆ ವರ್ತಿಸಿ, ರಸ್ತೆ ಬದಿ ಹಾದು ಹೋಗುತ್ತಿದ್ದ ಅನಿತಾ ಅವರ ಮೇಲೆ ದಾಳಿ ಮಾಡಿ, ಭೀಕರವಾಗಿ ದಾಳಿ ಮಾಡಿತ್ತು. ಗುರುವಾರ ಸ್ಥಳೀಯರು ಅನಿತಾರನ್ನು ಕಂಡು ಆಸ್ಪತ್ರೆಗೆ ಸೇರಿಸುವಾಗ ಅವರು ಅಸುನೀಗಿದ್ದರು.








