ಬೆಂಗಳೂರು : ಸಕ್ಕರೆಯಲ್ಲಿ ಶೇ.20ರಷ್ಟನ್ನು ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿಯೇ ಕಡ್ಡಾಯವಾಗಿ ಪ್ಯಾಕಿಂಗ್ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ನಿಂದ ತಡೆ ಬಿದ್ದಿದೆ. ಕೇಂದ್ರದ ಅಧಿಸೂಚನೆಯನ್ನು ಮುಂದಿನ ವಿಚಾರಣೆವರೆಗೆ ಕೋರ್ಟ್ ತಡೆ ಹಿಡಿದಿದೆ.
ಸೌತ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ – ಕರ್ನಾಟಕ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸೆಣಬಿನ ಚೀಲಗಳಲ್ಲಿ ಸಕ್ಕರೆಯನ್ನು ಪ್ಯಾಕೇಜಿಂಗ್‌ಗೆ 2022ರ ಜುಲೈ 21ರಂದು ನಡೆದ ಸ್ಥಾಯಿ ಸಲಹಾ ಸಮಿತಿಯ ಸಭೆಯಲ್ಲಿ ವಿನಾಯಿತಿ ನೀಡಲಾಗಿದೆ.
ಸೆಣಬಿನ ಚೀಲ ತಯಾರಿಕೆಯಲ್ಲಿ ಬಳಸಲಾಗುವ ಎಣ್ಣೆಯು ಟ್ರೋಮೋಜನಿಕ್ (ಗಡ್ಡೆಜನಕ) ಎಂದು ಕೈಗಾರಿಕಾ ವಿಷಶಾಸ್ತ್ರ ಸಂಶೋಧನಾ ಕೇಂದ್ರ ಅಭಿಪ್ರಾಯಪಟ್ಟಿದೆ. ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದರಿಂದ ಸಕ್ಕರೆಯ ಗುಣಮಟ್ಟ ಹಾಳಾಗುವುದಲ್ಲದೆ, ಅದು ಕಲುಷಿತಗೊಳ್ಳುತ್ತದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಸೆಣಬಿನ ಚೀಲಗಳಲ್ಲಿ ಸಕ್ಕರೆ ಪ್ಯಾಕಿಂಗ್ ಮಾಡುವ ಸಂಬಂಧ ಸಣಬಿನ ಪ್ಯಾಕೇಜಿಂಗ್ ವಸ್ತುಗಳ (ಸರಕುಗಳಲ್ಲಿ ಕಡ್ಡಾಯ ಬಳಕೆ) ಕಾಯ್ದೆ-1987ರ ಸೆಕ್ಷನ್ 3ರ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸೆಣಬಿನ ಕಚ್ಚಾ ಪದಾರ್ಥಗಳ ಉತ್ಪನ್ನ ಹಾಗೂ ಸೆಣಬಿನ ಪ್ಯಾಕೇಜಿಂಗ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. 1 ಕ್ವಿಂಟಾಲ್ ಮೇಲ್ಪಟ್ಟ ಸಗಟು ಪ್ಯಾಕೇಜಿಂಗ್ ಹಾಗೂ ರಫ್ತಿಗೆ ಈ ಮಿತಿ ಅನ್ವಯ ಆಗಲ್ಲ. ಕೇವಲ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ವಿತರಣೆಗಷ್ಟೇ ಇದು ಅನ್ವಯವಾಗಲಿದೆ ಎಂದು ತಿಳಿಸಿದರು.
ಅಲ್ಲದೆ, ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇ.20ರಷ್ಟನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡಬೇಕು ಎಂದು ಕೇಂದ್ರ ಜವಳಿ ಸಚಿವಾಲಯ 2023ರ ಡಿ.26 ಹಾಗೂ 2024ರ ಜೂ.28ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಮುಂದಿನ ವಿಚಾರಣೆವರೆಗೆ ತಡೆ ಹಿಡಿದ ನ್ಯಾಯಾಲಯ, ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿತು.