ಬೆಂಗಳೂರು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ 60 ಎಕರೆಗೂ ಅಧಿಕ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಒತ್ತುವರಿ ತೆರವುಗೊಳಿಸುವಂತೆ ಅರಣ್ಯ ಇಲಾಖೆ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮುಂದಿನ ವಿಚಾರಣೆಯವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದೆಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ಸೂಚಿಸಿ, ನೋಟಿಸ್ ಜಾರಿ ಮಾಡಿದೆ.
ಪ್ರಕರಣದ ಹಿನ್ನೆಲೆ ಏನು?
ಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದ ಸರ್ವೇ ಸಂಖ್ಯೆ 1 ಮತ್ತು 2 ರಲ್ಲಿ ಒಟ್ಟು 60 ಎಕರೆ 23 ಗುಂಟೆ ಜಮೀನನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒತ್ತುವರಿ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಈ ಹಿಂದೆ ನೋಟಿಸ್ ನೀಡಿತ್ತು. ಕಳೆದ ಏಪ್ರಿಲ್ 10 ರಂದು ಮೇಲ್ಮನವಿ ಪ್ರಾಧಿಕಾರವು ಈ ಒತ್ತುವರಿಯನ್ನು ದೃಢೀಕರಿಸಿ, 30 ದಿನಗಳೊಳಗೆ ಜಮೀನು ಹಸ್ತಾಂತರಿಸುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಮೇಶ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಾದವೇನು?
ವಿಚಾರಣೆ ವೇಳೆ ರಮೇಶ್ ಕುಮಾರ್ ಅವರ ಪರ ವಕೀಲರು ಪ್ರಮುಖ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು:
-
ಗಡಿ ವಿವಾದ: ಅರಣ್ಯ ಇಲಾಖೆಯು ಅರಣ್ಯದ ಗಡಿಯನ್ನು ಇನ್ನೂ ಅಧಿಕೃತವಾಗಿ ನಿಗದಿಪಡಿಸಿಲ್ಲ (ಸೆಕ್ಷನ್ 19ರ ಅನ್ವಯ). ಗಡಿಯೇ ನಿಗದಿಯಾಗದಿದ್ದಾಗ ಒತ್ತುವರಿ ಎಂದು ಘೋಷಿಸುವುದು ಕಾನೂನುಬಾಹಿರ.
-
ದಾಖಲೆಗಳ ಗೊಂದಲ: ದಾಖಲೆಗಳ ಪ್ರಕಾರ 113 ಎಕರೆ ಅರಣ್ಯ ಭೂಮಿ ಇರಬೇಕು. ಆದರೆ ಅರಣ್ಯ ಇಲಾಖೆ ಈಗ 245 ಎಕರೆ ತನ್ನದೆಂದು ಹಕ್ಕು ಮಂಡಿಸುತ್ತಿದೆ.
-
ಜಿಲ್ಲಾಧಿಕಾರಿ ವರದಿ: ಜಿಲ್ಲಾಧಿಕಾರಿಗಳು ಈ ಹಿಂದೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ, ಅರಣ್ಯ ಇಲಾಖೆಯು ತನ್ನ ಹಕ್ಕು ಮಂಡನೆಗೆ ಯಾವುದೇ ಪೂರಕ ದಾಖಲೆ ಸಲ್ಲಿಸಿಲ್ಲ ಎಂದು ತಿಳಿಸಲಾಗಿದೆ. ಅಲ್ಲದೆ, ಸುಮಾರು 50-60 ವರ್ಷಗಳ ಹಿಂದೆಯೇ ಕಂದಾಯ ಇಲಾಖೆ ಈ ಜಮೀನನ್ನು ಮಂಜೂರು ಮಾಡಿದೆ ಎಂದು ವಾದಿಸಿದರು.
ಹೈಕೋರ್ಟ್ ಆದೇಶದ ಸಾರಾಂಶ
ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಪೀಠವು, ಅರಣ್ಯ ಸಂರಕ್ಷಣಾಧಿಕಾರಿಗಳು (ಬೆಂಗಳೂರು ವಿಭಾಗ) ಹೊರಡಿಸಿದ್ದ ತೆರವು ಆದೇಶಕ್ಕೆ ತಡೆ ನೀಡಿದೆ. “ಮುಂದಿನ ವಿಚಾರಣೆಯವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು” ಎಂದು ಆದೇಶಿಸಿದ ನ್ಯಾಯಾಲಯವು, ಈ ಕುರಿತು ಅಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ಈ ಮಧ್ಯಂತರ ಆದೇಶದಿಂದಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸದ್ಯಕ್ಕೆ ಕಾನೂನುಬದ್ಧವಾಗಿ ದೊಡ್ಡ ಸಮಾಧಾನ ಸಿಕ್ಕಂತಾಗಿದೆ.
ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಯಾವಾಗ? ರಿಸಲ್ಟ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ | SSLC exam result







