ಶಿವಮೊಗ್ಗ: ನಿವೃತ್ತ ಮುಖ್ಯ ಶಿಕ್ಷಕ ನಾರಾಯಣಮೂರ್ತಿ ಅವರು ತಮ್ಮ ಶೈಕ್ಷಣಿಕ ಸೇವೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ಅವರ ಹೆಸರಿನ ಹಿಂದೆ ‘ಸೇವಾಸಾಗರ’ ಎಂಬ ಬಿರುದು ಬರಲು ಅವರ ಅವಿರತ ಶ್ರಮ ಮತ್ತು ಸಮಾಜಮುಖಿ ಚಿಂತನೆಯೇ ಕಾರಣ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಶೃಂಗೇರಿ ಶಂಕರಮಠದಲ್ಲಿ ನಾರಾಯಣ ಮೂರ್ತಿ ಕಾನುಗೋಡು ಅವರ ಸ್ನೇಹಿತರ ಬಳಗದ ವತಿಯಿಂದ, ಅವರಿಗೆ 70 ವರ್ಷ ತುಂಬಿದ (ಸಪ್ತತಿ ಸಂಭ್ರಮ) ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆತ್ಮೀಯ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಾರಾಯಣಮೂರ್ತಿ ಅವರು ಕೇವಲ ಶಿಕ್ಷಕರಾಗಿ ಸೀಮಿತವಾಗದೆ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ವಿಶೇಷ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಶ್ಲಾಘಿಸಿದರು.
ಸವಾಲುಗಳನ್ನು ಎದುರಿಸಿ ಕಾರ್ಯಸಿದ್ಧಿ ಮಾಡುವ ಅಪರೂಪದ ವ್ಯಕ್ತಿತ್ವ
ಸಾಮಾಜಿಕ ಕಾರ್ಯಕರ್ತ ಅಬಸೆ ದಿನೇಶಕುಮಾರ್ ಎನ್. ಜೋಷಿ ಮಾತನಾಡಿ, “ನಾರಾಯಣ ಮೂರ್ತಿ ಅವರದ್ದು ಅಪರೂಪದ ವ್ಯಕ್ತಿತ್ವ. ಅವರಲ್ಲಿ ಮಕ್ಕಳೊಡನೆ ಮಕ್ಕಳಾಗಿ, ಯುವಕರೊಡನೆ ಯುವಕರಾಗಿ ಬೆರೆಯುವ ವಿಶೇಷ ಗುಣವಿದೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಸಂಕಲ್ಪ ತೊಟ್ಟು ಹೊರಟಾಗ, ಎಂತಹ ಸವಾಲುಗಳು ಎದುರಾದರೂ ಅದನ್ನು ಮೆಟ್ಟಿ ನಿಂತು ಕಾರ್ಯಸಿದ್ದಿಗೊಳಿಸುವ ಅಪೂರ್ವ ಶಕ್ತಿ ಅವರಿಗಿದೆ” ಎಂದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ನಾರಾಯಣ ಮೂರ್ತಿ ಅವರು ಕೈಗೆತ್ತಿಕೊಂಡ ಪ್ರತಿಯೊಂದು ಕೆಲಸದಲ್ಲೂ ಹೊಸತನ ಇರುತ್ತಿತ್ತು. ಕಾರ್ಯಕ್ರಮಗಳನ್ನು ಹೇಗೆ ಸಂಘಟಿಸಬೇಕು ಮತ್ತು ಅದನ್ನು ಹೇಗೆ ಯಶಸ್ವಿಗೊಳಿಸಬೇಕು ಎಂಬುದನ್ನು ಅವರಿಂದ ನೋಡಿ ಕಲಿಯಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ: ನಾರಾಯಣ ಮೂರ್ತಿ ಕಾನುಗೋಡು
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾರಾಯಣ ಮೂರ್ತಿ ಕಾನುಗೋಡು ಅವರು, “ನನ್ನ ಜೀವನದಲ್ಲಿ ಶಿಸ್ತು ಮತ್ತು ಸಮಾಜಮುಖಿ ಕಾರ್ಯಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವೇ (RSS) ಪ್ರಮುಖ ಪ್ರೇರಣೆ. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ತತ್ವವನ್ನು ನನ್ನ ತಂದೆ ನನಗೆ ಹೇಳಿಕೊಟ್ಟಿದ್ದರು. ಅದನ್ನು ನಾನು ಇಂದಿಗೂ ಅಕ್ಷರಶಃ ಪಾಲಿಸುತ್ತಿದ್ದೇನೆ. ಬಡತನದ ನಡುವೆಯೂ ನಮ್ಮ ಪೋಷಕರು ನೀಡಿದ ಉತ್ತಮ ಸಂಸ್ಕಾರವೇ ನಾನು ಸಮಾಜದಲ್ಲಿ ಮಾದರಿಯಾಗಿ ಬದುಕಲು ಮಾರ್ಗದರ್ಶನ ನೀಡಿದೆ” ಎಂದು ಭಾವುಕರಾಗಿ ನುಡಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಗಣೇಶ್ ಪ್ರಸಾದ್, ಸುಧೀರ್ ಶೆಟ್ಟಿ, ಡಾ. ಪ್ರಸನ್ನ, ಕವಲಕೋಡು ವೆಂಕಟೇಶ್, ಗೋಪಾಲ ಸಿಂಗ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಮಾತನಾಡಿದರು.
ಮಾನಸ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಐ.ವಿ. ಹೆಗಡೆ ಸ್ವಾಗತ ಕೋರಿದರು. ಮಾ.ಸ. ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಷಾ ಮತ್ತು ಶೇಷಗಿರಿ ಹೆಗಡೆ ಸಮಗ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಹಿಜಾಬ್ ನಿರ್ಧಾರ ಹಿಂಪಡೆಯಿರಿ, ಬೇಸೂರು ಅಣುಸ್ಥಾವರ ಕೈಬಿಡಿ: ಸಾಗರದಲ್ಲಿ ಬಿಜೆಪಿ ಪ್ರತಿಭಟಿಸಿ ಆಗ್ರಹ
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಹಗರಣಕ್ಕೆ ಬಿಗ್ ಟ್ವಿಸ್ಟ್: ರಾಜಸ್ಥಾನದ ಒಂದೇ ಕುಟುಂಬ, 5 ಜನ, ಸತತ 2 ವರ್ಷ ನೀಟ್ ಪಾಸ್







