ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಯತ್ನದ ಪ್ರಕರಣವು ಈಗ ರಾಷ್ಟ್ರೀಯ ಭದ್ರತಾ ಆಯಾಮವನ್ನು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಹೆಚ್‌ಆರ್ ಮ್ಯಾನೇಜರ್ ನಿಧಾ ಖಾನ್ ಮತ್ತು ದೆಹಲಿ ಸ್ಫೋಟದ ಆರೋಪಿ ಶಾಹೀನ್ ನಡುವೆ ಇರುವ ಸಂಬಂಧದ ಕುರಿತು ದೆಹಲಿ ಪೊಲೀಸರ ವಿಶೇಷ ಘಟಕ (Special Cell) ತನಿಖೆ ಆರಂಭಿಸಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರ ಎನ್ನಲಾದ ಶಾಹೀನ್ ಎಂಬಾತನೊಂದಿಗೆ ನಿಧಾ ಖಾನ್ ನಿರಂತರ ಸಂಪರ್ಕದಲ್ಲಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಫೋನ್ ಕರೆಗಳು ಮತ್ತು ಡಿಜಿಟಲ್ ಸಂವಹನಗಳನ್ನು ಪೊಲೀಸರು ಸ್ಕ್ಯಾನ್ ಮಾಡುತ್ತಿದ್ದಾರೆ.
ಮಹಾರಾಷ್ಟ್ರ ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡದ (SIT) ಜೊತೆಗೆ ಈಗ ದೆಹಲಿಯ ಭಯೋತ್ಪಾದನಾ ವಿರೋಧಿ ದಳದ (Special Cell) ಅಧಿಕಾರಿಗಳು ಕೈಜೋಡಿಸಿದ್ದಾರೆ. ಕಾರ್ಪೊರೇಟ್ ವಲಯದ ಮರೆಯಲ್ಲಿ ಯಾವುದಾದರೂ ದೇಶವಿರೋಧಿ ಜಾಲ ಕೆಲಸ ಮಾಡುತ್ತಿದೆಯೇ ಎಂಬ ಬಗ್ಗೆ ತಪಾಸಣೆ ನಡೆಯುತ್ತಿದೆ.
ಮಹಿಳಾ ಉದ್ಯೋಗಿಗಳನ್ನು ಕೆಲಸದ ಆಮಿಷವೊಡ್ಡಿ ಸೆಳೆದು, ನಂತರ ಅವರನ್ನು ಮತಾಂತರಕ್ಕೆ ಪ್ರಚೋದಿಸುವ ಮತ್ತು ಬ್ಲ್ಯಾಕ್‌ಮೇಲ್ ಮಾಡುವ ದೊಡ್ಡ ಜಾಲದ ಹಿಂದೆ ಬಾಹ್ಯ ಶಕ್ತಿಗಳ ಕೈವಾಡವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.








